ಬೆಂಗಳೂರು,ಫೆ.1- ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, 60 ವರ್ಷದ ಮನೆ ಯಜಮಾನಿಯನ್ನು ಕೊಲೆ ಮಾಡಿದ ಮನೆಗೆಲಸಗಾರ ತಾನೂ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಟಿಎಂ ಲೇಔಟ್ 2ನೇ ಹಂತದ ಕೆಎಎಸ್ ಬಡಾವಣೆಯ ನಿವಾಸಿ ಸರಿತಾ (60) ಎಂಬುವವರನ್ನು ಕೊಲೆ ಮಾಡಿ ಆತಹತ್ಯೆಗೆ ಶರಣಾಗಿರುವ ಮನೆಗೆಲಸಗಾರ ದೇವರಾಜು (40).
ಮನೆಯ ಯಜಮಾನಿಯನ್ನು ಮನೆಕೆಲಸದವ ಯಾವ ಕಾರಣಕ್ಕೆ ಕೊಲೆ ಮಾಡಿ ಆತಹತ್ಯೆ ಮಾಡಿಕೊಂಡಿರುವುದು ಏಕೆ ಎಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆರೋಪಿ ದೇವರಾಜು ಕೊಲೆಗೂ ಮುನ್ನ ಸರಿತಾ ಅವರ ಮೇಲೆ ಅತ್ಯಾಚಾರವೆಸಗಿದ್ದಾನೆಯೇ ಎಂಬುವುದರ ಬಗ್ಗೆ ವೈದ್ಯಕೀಯ ಪರೀಕ್ಷೆಯ ವರದಿಯಿಂದಷ್ಟೇ ಗೊತ್ತಾಗಲಿದೆ.
ಸರಿತಾ ಅವರ ಪತಿ ಉದ್ಯಮಿಯಾಗಿದ್ದು, ಮಗಳು ಖಾಸಗಿ ಕಂಪನಿ ಉದ್ಯೋಗಿ. ಇವರ ಮನೆಯಲ್ಲಿ 10 ವರ್ಷಗಳಿಂದ ಮನೆಗೆಲಸದ ದೇವರಾಜು ನೆಲೆಸಿದ್ದನು. ಸರಿತಾ ಅವರ ಪತಿ ಕೆಲಸದ ನಿಮಿತ್ತ ದುಬೈಗೆ ತೆರಳಿದ್ದಾರೆ. ಮನೆಯ ಮೊದಲ ಮಹಡಿಯಲ್ಲಿ ಮಗಳು ರಾತ್ರಿ ಎಂದಿನಂತೆ ಮಲಗಿದ್ದಾರೆ.
ಕೆಳ ಮಹಡಿಯ ಕೊಠಡಿಯಲ್ಲಿದ್ದ ಸರಿತಾ ಅವರನ್ನು ಆರೋಪಿ ದೇವರಾಜು ಕುತ್ತಿಗೆ ಹಿಸುಕಿ ಸಾಯಿಸಿ ನಂತರ ಆತನೂ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.
ಇಷ್ಟೆಲ್ಲಾ ಘಟನೆ ನಡೆದರೂ ಮೊದಲ ಮಹಡಿಯಲ್ಲಿದ್ದ ಮಗಳ ಗಮನಕ್ಕೆ ಬಂದಿಲ್ಲ.ಮುಂಜಾನೆ 4.30 ರ ಸುಮಾರಿಗೆ ಸರಿತಾ ಅವರ ಪತಿ ದುಬೈನಿಂದ ನಗರಕ್ಕೆ ವಾಪಸ್ ಆಗಿದ್ದು, ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆ ಸಂದರ್ಭದಲ್ಲಿ ಎಚ್ಚರಗೊಂಡ ಮಗಳು ಕೆಳಗೆ ಇಳಿದು ಬಂದು ಬಾಗಿಲ ಚಿಲಕ ತೆಗೆದು ಸೀದಾ ತನ್ನ ರೂಮಿಗೆ ಹೋಗಿ ಮಲಗಿದ್ದಾಳೆ.
ಬಳಿಕ ಅವರು ಸರಿತಾ ಅವರ
ರೂಮ್‌ಗೆ ಹೋದಾಗ ಪತ್ನಿ ಕೊಲೆಯಾಗಿರುವ ಭೀಕರ ಘಟನೆ ಕಂಡು ತಕ್ಷಣ ಅವರು ಕಿರುಚಿಕೊಂಡಿದ್ದಾರೆ. ಮೊದಲ ಮಹಡಿಯಲ್ಲಿದ್ದ ಮಗಳು ಕೆಳಗೆ ಇಳಿದು ಬಂದಿದ್ದಾಳೆ. ಅಲ್ಲದೇ ಮನೆಗೆಲಸಗಾರ ಆತಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ತಕ್ಷಣ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೈಕೋ ಲೇಔಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಣಕಾಸು ವಿಚಾರಕ್ಕೆ ಕೊಲೆಯಾಗಿದೆಯೋ, ಅಥವಾ ಅತ್ಯಾಚಾರವೆಸಗಿ ತಾನು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಆತಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬುವುದು ತನಿಖೆಯಿಂದಷ್ಟೇ ಗೊತ್ತಾಗಲಿದೆ.
