Homeಮನರಂಜನೆವ್ಯಾಪಾರ ರಹಿತ ವಲಯಗಳಾಗಲಿವೆ ಬೆಂಗಳೂರಿನ ಪ್ರಮುಖ ರಸ್ತೆಗಳು

ವ್ಯಾಪಾರ ರಹಿತ ವಲಯಗಳಾಗಲಿವೆ ಬೆಂಗಳೂರಿನ ಪ್ರಮುಖ ರಸ್ತೆಗಳು

ಬೆಂಗಳೂರು, ಜು.9 ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಎಲ್ಲಾ ಪ್ರಮುಖ ಹಾಗೂ ಉಪ-ಪ್ರಮುಖ ರಸ್ತೆಗಳು ವ್ಯಾಪಾರ ರಹಿತ ವಲಯಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ.ನಗರ ಪೊಲೀಸ್‌‍ ಆಯುಕ್ತರು ಜಿಬಿಎಗೆ ಅಧಿಕೃತ ಪತ್ರ ಬರೆದು ಈ ಕುರಿತಂತೆ ಅಗತ್ಯ ಆಡಳಿತಾತ್ಮಕ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ.

ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ, ರಸ್ತೆಬದಿ ಅನಧಿಕೃತ ವ್ಯಾಪಾರ ಮತ್ತು ವಾಹನ ನಿಲುಗಡೆಯಿಂದ ಸಾರ್ವಜನಿಕರ ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿರುವ ಪೊಲೀಸ್‌‍ ಇಲಾಖೆ, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಪಾದಚಾರಿಗಳ ಸುರಕ್ಷತೆ ಹಾಗೂ ವಾಹನ ಸಂಚಾರ ಸುಗಮಗೊಳಿಸಲು ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದೆ.

ಪ್ರಮುಖ ಹಾಗೂ ಉಪ-ಪ್ರಮುಖ ರಸ್ತೆಗಳಲ್ಲಿನ ಅತಿಕ್ರಮಣ ತೆರವು, ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಪರಿಕರಗಳ ಸ್ಥಳಾಂತರ, ಅನಧಿಕೃತ ವಾಹನ ನಿಲುಗಡೆ ತೆರವು ಮತ್ತು ರಸ್ತೆಬದಿ ವ್ಯಾಪಾರವನ್ನು ಸಂಪೂರ್ಣ ನಿಷೇಧಿಸಲು ಸೂಚಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ವಿಸ್ತರಿಸಿ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಪ್ರಸ್ತಾವವಿದೆ.

ಆದರೆ, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡಿರುವ ಸೂಕ್ತ ಆಂತರಿಕ ರಸ್ತೆಗಳಲ್ಲಿ, 2014ರ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ಕಾಯ್ದೆಯ ನಿಯಮಾನುಸಾರ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.

ಪೊಲೀಸ್‌‍ ಇಲಾಖೆಯ ಸಹಯೋಗದೊಂದಿಗೆ ಪ್ರತಿ ನಗರ ಪಾಲಿಕೆ ತನ್ನ ವ್ಯಾಪ್ತಿಯ ಪ್ರಮುಖ ಹಾಗೂ ಉಪ-ಪ್ರಮುಖ ರಸ್ತೆಗಳನ್ನು ನಿಯಮಾನುಸಾರ ವ್ಯಾಪಾರ ರಹಿತ ವಲಯ ಎಂದು ಘೋಷಿಸುವ ಪ್ರಕ್ರಿಯೆ ಕೈಗೊಳ್ಳುವಂತೆ ಜಿಬಿಎ ಸೂಚನೆ ನೀಡಿದೆ. ಇದಕ್ಕಾಗಿ ಎಸ್‌‍ಒಪಿ, ಕರಡು ಸಾರ್ವಜನಿಕ ಅಧಿಸೂಚನೆ ಹಾಗೂ ಕಾನೂನು ಅಭಿಪ್ರಾಯದ ಆಧಾರದ ಮೇಲೆ ಮುಂದಿನ ಕ್ರಮ ಜರುಗಲಿದೆ ಎಂದು ತಿಳಿದುಬಂದಿದೆ.

RELATED ARTICLES

Latest News