ಬೆಂಗಳೂರು, ಜು.9 ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದುವರೆಗೆ 50,92,556 ನಮೂನೆ ಅರ್ಜಿಗಳು ವಿತರಿಸಲಾಗಿದ್ದು, ಇದು ಒಟ್ಟು ಶೇ.49.02ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಎಸ್‌ಐಆರ್ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಉಳಿದ ನಮೂನೆಗಳ ವಿತರಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಜೊತೆಗೆ ಡಿಜಿಟಲೀಕರಣ ಕಾರ್ಯವನ್ನು ವೇಗವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಓ) ಕಾರ್ಯವನ್ನು ಮತದಾರ ನೋಂದಣಾಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಮನೆಗಳು ಮತ್ತು ಮತದಾರರನ್ನು ಗುರುತಿಸಲು ಬೂತ್ ಮಟ್ಟದ ಏಜೆಂಟರು ಸಹಕರಿಸಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ಯಶಸ್ವಿಗೆ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಮನೆಗಳಿಗೆ ಬಣ್ಣದ ಸ್ಟಿಕ್ಕರ್; ನಮೂನೆ ಅರ್ಜಿ ವಿತರಿಸಿದ ಮನೆಗಳಿಗೆ ನೇರಳೆ ಬಣ್ಣದ ಸ್ಟಿಕ್ಕರ್ ಅಳವಡಿಸಲಾಗುತ್ತಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಿ ಮುಂದಿನ ಭೇಟಿಯ ದಿನಾಂಕ ನಮೂದಿಸಲಾಗುತ್ತದೆ. ಒಟ್ಟು ಮೂರು ಬಾರಿ ಭೇಟಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಭಾಗವಾರು ಪ್ರಗತಿ:ಕೇಂದ್ರ ವಿಭಾಗ 9,62,833 (50.95%), ಉತ್ತರ ವಿಭಾಗ 11,90,491 (51.04%), ದಕ್ಷಿಣ ವಿಭಾಗ 9,91,270 (46.22%), ಬೆಂಗಳೂರು ನಗರ 19,47,962 (48.44%) ಸೇರಿದಂತೆ ಒಟ್ಟು: 50,92,556 ನಮೂನೆ ಅರ್ಜಿಗಳ ವಿತರಣೆ (ಶೇ.49.02) ಮಾಡಲಾಗಿದೆ.
