ನವದೆಹಲಿ,ಜು.9- ರಾಜ್ಯಕ್ಕೆ ಬರಬೇಕಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅನುದಾನ ಬಿಡುಗಡೆ ಮಾಡಬೇಕೆಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಕೇಂದ್ರ ಸಚಿವ ಪಹ್ಲಾದ್ ಜೋಶಿಯವರಲ್ಲಿ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಅವರು, ಕೆಎಂಎಸ್ 2025-26ರಲ್ಲಿ ರಾಜ್ಯವು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿದ್ದು, ಈ ಪೈಕಿ ಕೇಂದ್ರ ಸರ್ಕಾರ ಇದುವರೆಗೆ 190.10 ಕೋಟಿ ಬಿಡುಗಡೆ ಮಾಡಿದೆ. ಉಳಿದ 4,232.07 ಕೋಟಿ ಮರುಪಾವತಿಯನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಅಲ್ಲದೆ ಕೆಎಂಎಸ್ 2022-23ಕ್ಕೆ ಸಂಬಂಧಿಸಿದ 375.99 ಕೋಟಿ ತಾತ್ಕಾಲಿಕ ಸಬ್ಸಿಡಿ ಹಕ್ಕುಪತ್ರವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದ್ದು, ಅದನ್ನೂ ಶೀಘ್ರ ಮಂಜೂರು ಮಾಡುವಂತೆ ಕೋರಿದರು. ಇದರ ಜೊತೆಗೆ ಕೆಎಂಎಸ್ 2009-10 ರಿಂದ 2024-25ರವರೆಗಿನ ಅವಧಿಗೆ ಸಂಬಂಧಿಸಿದ 1,902.58 ಕೋಟಿ ಎಂಎಸ್ಪಿ ಬಾಕಿ ಮರುಪಾವತಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮುನಿಯಪ್ಪ ಮನವಿ ಮಾಡಿದರು.
ಈ ಕುರಿತು ಸಕಾರಾತಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, 1,902.58 ಕೋಟಿ ಬಾಕಿ ಮರುಪಾವತಿ ಪ್ರಕರಣವನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಕೆಎಂಎಸ್ 2025-26ರ ಮರುಪಾವತಿ ಹಕ್ಕುಪತ್ರಗಳು ರಾಜ್ಯ ಸರ್ಕಾರದಿಂದ ಸಲ್ಲಿಕೆಯಾದ ತಕ್ಷಣ ನಿಯಮಾನುಸಾರ ಪರಿಶೀಲಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಬಾಕಿ ಇರುವ ಎಲ್ಲ ಮರುಪಾವತಿ ಮೊತ್ತಗಳು ಶೀಘ್ರ ಬಿಡುಗಡೆಯಾಗಲಿದ್ದು, ಇದರಿಂದ ರಾಜ್ಯದಲ್ಲಿ ಎಂಎಸ್ಪಿ ಖರೀದಿ ಕಾರ್ಯಗಳು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಲಿದ್ದು, ರೈತರಿಗೆ ಸಕಾಲದಲ್ಲಿ ಪಾವತಿ ಮಾಡಲು ಅನುಕೂಲವಾಗಲಿದೆ ಎಂದು ಮುನಿಯಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
