Homeರಾಜ್ಯಬರಗಾಲ-ಪ್ರವಾಹ ಸಂತ್ರಸ್ತ ರೈತರಿಗೆ ತುರ್ತು ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅಶೋಕ್‌ ಒತ್ತಾಯ

ಬರಗಾಲ-ಪ್ರವಾಹ ಸಂತ್ರಸ್ತ ರೈತರಿಗೆ ತುರ್ತು ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅಶೋಕ್‌ ಒತ್ತಾಯ

Ashok urges state government to provide emergency relief to drought-flood affected farmers

ಬೆಂಗಳೂರು,ಜು.9-ಬರಗಾಲ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಬೇಕೆಂದು ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ತುರ್ತು ಪರಿಹಾರದ ಜೊತೆಗೆ ತಲಾ 50,000 ರೂ.ವರೆಗೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ಒಂದೆಡೆ ರಾಜ್ಯದ ಹಲವಾರು ಜಿಲ್ಲೆಗಳು ತೀವ್ರ ಬರಗಾಲದಿಂದ ತತ್ತರಿಸಿದ್ದರೆ, ಮತ್ತೊಂದೆಡೆ ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಅತಿವೃಷ್ಟಿ, ಪ್ರವಾಹದ ಆತಂಕ ಎದುರಾಗಿದೆ.

ಸಂಕಷ್ಟದಲ್ಲಿರುವ ಲಕ್ಷಾಂತರ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಕುಟುಂಬಗಳು ಸರ್ಕಾರದ ತುರ್ತು ನೆರವು ನಿರೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ತಾವು ಬರಪೀಡಿತ ರೈತರ ಸಾಲಮನ್ನಾ ಕುರಿತು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದೀರಿ. ಆದರೆ ರೈತರಿಗೆ ಈಗ ಬೇಕಾಗಿರುವುದು ಪರಿಶೀಲನೆ ಅಲ್ಲ, ತಕ್ಷಣದ ನಿರ್ಧಾರ. ವಿಳಂಬ ಮಾಡದೆ ಬರ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ಎಲ್ಲ ರೈತರಿಗೆ 50,000 ವರೆಗೆ ಸಾಲಮನ್ನಾ ಘೋಷಿಸಿ ಅವರ ಸಂಕಷ್ಟಕ್ಕೆ ಸೃ0ದಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಬರ ಪರಿಹಾರ ಕಾರ್ಯಕ್ಕಾಗಿ 10 ಸಾವಿರ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಮಾಡಿರುವ ನಿರ್ಣಯ ಬೇಜವಾಬ್ದಾರಿಯುತ ಮತ್ತು ದುರದೃಷ್ಟಕರ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಲು, ಹಾಗೂ ರೈತರ ಗಮನ ಬೇರೆಡೆ ಸೆಳೆಯಲು ಕೇಂದ್ರದ ವಿರುದ್ಧ ರಾಜಕೀಯ ನಿರ್ಣಯ ಅಂಗೀಕರಿಸಿರುವುದು ಖಂಡನೀಯ. ಪ್ರಕೃತಿ ವಿಕೋಪವನ್ನು ಎದುರಿಸುವ ಸಂದರ್ಭದಲ್ಲೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಮಾಡುವ ಮನಸ್ಥಿತಿ ಈ ನಿರ್ಣಯದಲ್ಲಿ ಪ್ರತಿಫಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರ ನಿರ್ವಹಣೆ, ಬೆಳೆಹಾನಿ ಸಮೀಕ್ಷೆ, ಎಸ್‌‍ಡಿಆರ್‌ಎಫ್‌ ನಿಧಿಯ ಸಮರ್ಪಕ ಬಳಕೆ, ರೈತರಿಗೆ ಮಧ್ಯಂತರ ಪರಿಹಾರ ವಿತರಣೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಾಲಮಿತಿಯೊಳಗೆ ಸಮಗ್ರ ವರದಿ ಸಲ್ಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಇದನ್ನು ಸಮರ್ಪಕವಾಗಿ ನಿರ್ವಹಿಸುವ ಬದಲು ತನ್ನ ಆಡಳಿತ ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ದ ಆರೋಪಗಳ ನಿರ್ಣಯ ಕೈಗೊಂಡಿರುವುದು ರಾಜ್ಯದ ರೈತರಿಗೆ ಮಾಡುವ ದೊಡ್ಡ ದ್ರೋಹ ಎಂದಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕವು ವಿಪತ್ತು ನಿರ್ವಹಣೆ ಮತ್ತು ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ದಾಖಲೆ ಪ್ರಮಾಣದ ನೆರವು ಪಡೆದಿದೆ. ಕಳೆದ 12 ವರ್ಷಗಳಲ್ಲಿ ಎನ್‌ಡಿಆರ್‌ಎಫ್‌ನಡಿ 12,542.97 ಕೋಟಿಗೂ ಅಧಿಕ ನೆರವು ರಾಜ್ಯಕ್ಕೆ ಬಿಡುಗಡೆಯಾಗಿದೆ. ಇದರ ಜೊತೆಗೆ ಎಸ್‌‍ಡಿಆರ್‌ಎಫ್‌ನಡಿ ಕೇಂದ್ರದ ಪಾಲಿನ 3,806.30 ಕೋಟಿ ರೂ. ನಿಯಮಾನುಸಾರ ನಿರಂತರವಾಗಿ ಬಿಡುಗಡೆ ಮಾಡಲಾಗಿದೆ.

ಎನ್‌ಡಿಆರ್‌ಎಫ್‌ ನೆರವು ಯಾವುದೇ ಸರ್ಕಾರದ ಇಚ್ಛೆಯಂತೆ ಬಿಡುಗಡೆಯಾಗುವುದಿಲ್ಲ. ರಾಜ್ಯ ಸರ್ಕಾರ ಸಮಗ್ರ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಹಿತ ಮನವಿ ಸಲ್ಲಿಸಬೇಕು. ಆ ನಂತರ ಇದೇ ರೀತಿ ಇತರೆ ರಾಜ್ಯಗಳು ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ಕೇಂದ್ರದ ಗೃಹ ಸಚಿವರ ನೇತೃತ್ವದ ಸಮಿತಿ ಸಭೆ ನಿಯಮಾನುಸಾರ ರಾಜ್ಯಗಳಿಗೆ ಕಾನೂನುಬದ್ಧ ಪ್ರಕ್ರಿಯೆಯಂತೆ ನೆರವು ಬಿಡುಗಡೆ ಮಾಡುತ್ತದೆ. ಅಲ್ಲಿಯವರೆಗೆ ಎಸ್‌‍ಡಿಆರ್‌ಎಫ್‌ ನಿಧಿ ಬಳಸಿಕೊಂಡು ರೈತರಿಗೆ ತಕ್ಷಣದ ಪರಿಹಾರ ನೀಡುವುದು ರಾಜ್ಯ ಸರ್ಕಾರದ ಮೊದಲ ಕರ್ತವ್ಯ. ಈ ಮೂಲಭೂತ ಸತ್ಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿರುವ ಕೆಪಿಸಿಸಿ ನಡೆ ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಡಿಕೆಗಳು:
ಸರ್ಕಾರ ಕೂಡಲೇ ಬರ ಮತ್ತು ಪ್ರವಾಹದಿ0ದ ಸಂಕಷ್ಟಕ್ಕೊಳಗಾದ ಎಲ್ಲಾ ರೈತರಿಗೆ ಕನಿಷ್ಠ 50,000 ವರೆಗೆ ಸಾಲ ಮನ್ನಾ ಘೋಷಿಸಬೇಕು, ಎಸ್‌‍ಡಿಆರ್‌ಎಫ್‌ ನಿಧಿಯಿಂದ ತಕ್ಷಣ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ ಯಾವುದೇ ರೈತ ನೆರವಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಪ್ರತಿ ತಾಲ್ಲೂಕಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸಿ ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಹಾಗೂ ಪುನರ್ವಸತಿ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕು.

ಜಿಲ್ಲಾಧಿಕಾರಿಗಳಿಗೆ ಪಿಡಿ ಅಕೌಂಟ್‌ ಹಾಗೂ ಎಸ್‌‍ಡಿಆರ್‌ಎಫ್‌ ನಿಧಿಯಿಂದ ತುರ್ತು ಅನುದಾನ ಬಿಡುಗಡೆ ಮಾಡಿ ಪರಿಹಾರ ಕಾರ್ಯಗಳಿಗೆ ವೇಗ ನೀಡಬೇಕು, 5. ಬೆಳೆಹಾನಿ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ರಾಜ್ಯಕ್ಕೆ ದೊರೆಯಬೇಕಾದ ಎನ್‌ಡಿಆರ್‌ಎಫ್‌ ನೆರವನ್ನು ಶೀಘ್ರ ಪಡೆದುಕೊಳ್ಳಬೇಕು, ಸಚಿವರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅಶೋಕ್‌ ಒತ್ತಾಯಿಸಿದ್ದಾರೆ.

RELATED ARTICLES

Latest News