ಹುಬ್ಬಳ್ಳಿ,ಜು.9-ಬೆಳಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದು, ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಕೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ.
ಧಾರವಾಡ ಮೂಲದ ಕ್ರೂಸರ್ ವಾಹನದ ಚಾಲಕ ಸಂಜಯ ಅಂಗಡಿ (48), ಬಸವರಾಜ ಕನಕಮನವರ (48), ಅಭಿಷೇಕ ಈಶ್ವರ್ (28), ಅಕ್ಷಯ್ (26), ಅಭಿಷೇಕ್ (26), ಮಂಜುನಾಥ ಚುಳಕಿ (33) ಹಾಗೂ ಮೆಹಬೂಬ್ ನಗರದ ಸಚಿನ್ (28) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಶಿವರಾಜ್ ದುರ್ಗಪ್ಪ ಮಡಿವಾಳರ (22), ನವೀನ್ (24) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಇವರೆಲ್ಲರೂ ಪಾರ್ಟ್‌ಟೈಮ್ ಫುಡ್ ಡೆಲಿವರಿ ಬಾಯ್‌್ಸ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಪ್ರವಾಸಕ್ಕೆಂದು ಕ್ರೂಸರ್ ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು ಒಂಬತ್ತು ಮಂದಿ ನಿನ್ನೆ ರಾತ್ರಿ ಧಾರವಾಡದಿಂದ ಪ್ರಯಾಣ ಬೆಳೆಸಿದ್ದಾರೆ.

ಈ ಕ್ರೂಸರ್ ವಾಹನ ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಾಟ್‌ನ ಬಳಗಾರ್ ಬಳಿ ಇಂದು ಮುಂಜಾನೆ 2 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಅತೀ ವೇಗವಾಗಿ ಬಂದ ಲಾರಿ ಮುಖಾಮುಖಿಯಾಗಿ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ ಕ್ರೂಸರ್ ವಾಹನದೊಳಗೆ ಸಿಕ್ಕಿ ನರಳಾಡುತ್ತಿದ್ದ ಮೂವರು ಯುವಕರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ಪೈಕಿ ಸಚಿನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ವಾಹನದೊಳಗೆ ಸಿಕ್ಕಿಕೊಂಡಿದ್ದ ಮೃತದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿರುವ ಪೊಲೀಸರು ನಂತರ ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ತಮ ಮನೆ ಮಕ್ಕಳು ಸಾವನ್ನಪ್ಪಿರುವ ಸುದ್ದಿ ತಿಳಿದು ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಈ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ರಸ್ತೆಯಲ್ಲಿ ವಾಹನಗಳು ನಿಂತಲ್ಲೇ ನಿಂತಿದ್ದವು.

ಪೊಲೀಸರು ಸ್ಥಳಕ್ಕೆ ಕ್ರೇನ್ ತರಿಸಿಕೊಂಡು ನಜ್ಜುಗುಜ್ಜಾಗಿದ್ದ ಕ್ರೂಸರ್ ವಾಹನವನ್ನು ರಸ್ತೆ ಬದಿ ಸರಿಸಿ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಲಾರಿ ಚಾಲಕನ ಅತೀ ವೇಗ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಲ್ಲಾಪುರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ನೇಹಿತರ ಕೊನೆಯ ಸೆಲ್ಫಿ:ಪ್ರವಾಸ ಹೊರಡುವ ಮುನ್ನ ಈ ಸ್ನೇಹಿತರು ಧಾರವಾಡದ ಕೆಸಿಡಿ ಸರ್ಕಲ್ ಬಳಿ ಇರುವ ಪ್ರಸಿದ್ಧ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಸುಖಕರ ಪ್ರಯಾಣಕ್ಕಾಗಿ ಗಣಪತಿಗೆ ಪ್ರಾರ್ಥನೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಲ್ಲೇ ಎಲ್ಲರೂ ಒಟ್ಟಾಗಿ ಅತ್ಯಂತ ಸಡಗರದಿಂದ ಸೆಲ್ಫಿ ಫೋಟೋವನ್ನು ತೆಗೆದುಕೊಂಡಿದ್ದರು.
ದುರ್ದೈವವೆಂಬಂತೆ ಪ್ರಯಾಣ ಬೆಳೆಸಿದ ಕೆಲವೇ ಗಂಟೆಗಳಲ್ಲಿ ಏಳು ಮಂದಿ ಸ್ನೇಹಿತರು ಪ್ರಾಣ ಕಳೆದುಕೊಂಡಿರುವುದು ವಿಷಾದಕರ.
