ಬೆಂಗಳೂರು, ಜು. 9 ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಂಚ ಪಾಲಿಕೆಗಳ ಚುನಾವಣೆಯನ್ನು ಮತ್ತೆ ಮುಂದೂಡುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದೆ. ಬರುವ ಆ.31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲೇಬೇಕು ಯಾವುದೇ ಮಧ್ಯಂತರ ಅರ್ಜಿ ಸಲ್ಲಿಸುವುದು ಬೇಡ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರಿಂ ಕೋರ್ಟ್ ಪೀಠ ಎಚ್ಚರಿಕೆ ನೀಡಿರುವ ಮಧ್ಯೆಯೂ ಮತ್ತೆ ಚುನಾವಣೆ ಮುಂದೂಡಲು ಮತ್ತೊಂದು ಅವಕಾಶ ನೀಡುವಂತೆ ನ್ಯಾಯಲಯದ ಮೊರೆ ಹೋಗಲು ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.
ಸಧ್ಯ ನಡೆಯುತ್ತಿರುವ ಎಸ್‌ಐಆರ್ ಕಾರ್ಯದಿಂದಾಗಿ ನಮಗೆ ಆ.31ರೊಳಗೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೊಂದು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಮನವಿ ಸಲ್ಲಿಸುವಂತೆ ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಮತ್ತೆ ಈ ವಿಚಾರದಲ್ಲಿ ಯಾವುದೇ ಅರ್ಜಿ ಸಲ್ಲಿಸಬಾರದು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸರ್ಕಾರದ ಪರ ವಾದಿಸುತ್ತಿದ್ದ ವಕೀಲರನ್ನು ಬದಲಿಸಿ ಬೇರೊಬ್ಬ ಪ್ರಖ್ಯಾತ ವಕೀಲರ ಮೂಲಕ ಇದೇ 13 ರಂದು ನ್ಯಾಯಲಯಕ್ಕೆ ಚುನಾವಣೆ ಮುಂದೂಡಲು ಮತ್ತೊಂದು ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ಸರ್ಕಾರ ಸಲ್ಲಿಸುವ ಅಫಿಡವಿಟ್ ಅನ್ನು ಸುಪ್ರಿಂ ಕೋರ್ಟ್ ಪರಿಗಣಿಸಿದರೆ ಪಂಚ ಪಾಲಿಕೆಗಳ ಚುನಾವಣೆಗೆ ಮತ್ತೆ ಅನಿಶ್ಚಿತತೆ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಒಂದು ವೇಳೆ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿದರೆ ಜು.15 ರ ನಂತರ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಖಚಿತಪಡಿಸಿವೆ.
ಮಾಹಿತಿಯ ಪ್ರಕಾರ, ರಾಜ್ಯ ಚುನಾವಣಾ ಆಯೋಗದ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಯ ಬಹುಪಾಲು ಮಂದಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ನಿರತರಾಗಿರುವುದರಿಂದ ಚುನಾವಣಾ ಸಿದ್ಧತೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸರ್ಕಾರದ ಪ್ರಮುಖ ವಾದವಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಚುನಾವಣೆ ನಡೆಸಲು ಬೇಕಾದಷ್ಟು ಸಿಬ್ಬಂದಿ ಲಭ್ಯವಿಲ್ಲ. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಚುನಾವಣಾ ಪೂರ್ವ ಸಿದ್ಧತೆ ಆರಂಭಿಸುವುದ ಸೂಕ್ತ ಎನ್ನವು ಮಾಹಿತಿಯನ್ನು ಕೋರ್ಟ್‌ಗೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಿನಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಐದು ನಗರ ಪಾಲಿಕೆಗಳ ಚುನಾವಣೆಗಳನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಪ್ರಸ್ತುತ ಆಡಳಿತಾತ್ಮಕ ಹಾಗೂ ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ಆ ಗಡುವು ಪಾಲಿಸುವುದು ಸವಾಲಾಗಿದೆ ಎಂದು ಸರ್ಕಾರ ವಾದ ಮಂಡಿಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಅರ್ಜಿಗೆ ಸುಪ್ರೀಂ ಕೋರ್ಟ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಒಂದು ವೇಳೆ ಕಾಲಾವಕಾಶ ನೀಡಿದರೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮತದಾರರು ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇನ್ನೂ ಕೆಲವು ತಿಂಗಳು ಕಾಯಬೇಕಾಗುವ ಅನಿವಾರ್ಯತೆ ಎದುರಾಗುವ ಸಾಧ್ಯತೆಗಳಿವೆ.
