Homeಬೆಂಗಳೂರುಗುತ್ತಿಗೆದಾರನ ಮನೆಯಲ್ಲಿ 25 ಲಕ್ಷ ರೂ. ದೋಚಿದ್ದ ನೇಪಾಳಿ ದಂಪತಿ ಅರೆಸ್ಟ್

ಗುತ್ತಿಗೆದಾರನ ಮನೆಯಲ್ಲಿ 25 ಲಕ್ಷ ರೂ. ದೋಚಿದ್ದ ನೇಪಾಳಿ ದಂಪತಿ ಅರೆಸ್ಟ್

Nepali couple arrested for robbing Rs 25 lakh from contractor's house

ಬೆಂಗಳೂರು,ಜೂ.10- ಐಷಾರಾಮಿ ಜೀವನ ನಡೆಸಲು ಕೆಲಸಕ್ಕಿದ್ದ ಗುತ್ತಿಗೆದಾರರೊಬ್ಬರ ಮನೆಯಲ್ಲಿ 25 ಲಕ್ಷ ರೂ. ಕಳವು ಮಾಡಿಕೊಂಡು ಪರಾರಿಯಾಗಿದ್ದ ನೇಪಾಳಿ ದಂಪತಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ನೇಪಾಳ ಮೂಲದ ಪವನ್‌ ಬಿಸ್ತು(30) ಮತ್ತು ಸೀತಾಬಿಸ್ತು (28) ಬಂಧಿತ ದಂಪತಿ. ಅರ್ಕಾವತಿ ಲೇಔಟ್‌ನಲ್ಲಿ ವಾಸವಿರುವ ಗುತ್ತಿಗೆದಾರ ಸುಬ್ಬಾರೆಡ್ಡಿ ಎಂಬುವವರ ಮನೆಯಲ್ಲಿ ಈ ದಂಪತಿ ಒಂದು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು.

ಪವನ್‌ ಬಿಸ್ತು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರೆ, ಇವರ ಪತ್ನಿ ಸೀತಾ ಬಿಸ್ತು ಮನೆಗೆಲಸ ಮಾಡಿಕೊಂಡು ಅವರಿಗೆ ನೀಡಿದ್ದ ರೂಮ್‌ನಲ್ಲಿ ಉಳಿದುಕೊಳ್ಳುತ್ತಿದ್ದರು.ನೌಕರರಿಗೆ ವೇತನ ನೀಡುವ ಸಲುವಾಗಿ ಸುಬ್ಬಾರೆಡ್ಡಿ ಅವರು 25 ಲಕ್ಷ ಹಣವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಮನೆಗೆ ಬಂದು ಕಬೋರ್ಡ್‌ನಲ್ಲಿಟ್ಟು ಲಾಕ್‌ ಮಾಡಿ ಕೀಯನ್ನು ಮತ್ತೊಂದು ಕಬೋರ್ಡ್‌ನ ಬಟ್ಟೆಯ ಕೆಳಗೆ ಇಟ್ಟಿದ್ದರು.

ಇದನ್ನು ಮನೆ ಕೆಲಸ ಮಾಡುತ್ತಿದ್ದ ಸೀತಾ ಬಿಸ್ತು ನೋಡಿಕೊಂಡಿದ್ದಾಳೆ. ಮೇ 27 ರಂದು ಬೆಳಗ್ಗೆ ಗುತ್ತಿಗೆದಾರ ಸುಬ್ಬಾರೆಡ್ಡಿ ಅವರು ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾರೆ. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದರು.

ಸಂಜೆ ಸುಬ್ಬಾರೆಡ್ಡಿ ಅವರು ಮನೆಗೆ ಬಂದಾಗ ಸೆಕ್ಯೂರಿಟಿ ಗಾರ್ಡ್‌ ಕಾಣಿಸಿಲ್ಲ. ಅವರಿಗೆ ನೀಡಿದ್ದ ರೂಮಿನ ಬಳಿ ಹೋಗಿ ನೋಡಿದಾಗ ಬಾಗಿಲು ತೆರೆದಿತ್ತು. ಆತನ ಪತ್ನಿಯೂ ಸಹ ಇರಲಿಲ್ಲ. ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿದೆ.

ಕೆಲಸಕ್ಕಿದ್ದ ದಂಪತಿಯ ಮೇಲೆ ಅನುಮಾನಗೊಂಡು ತಕ್ಷಣ ಕೊಠಡಿಯೊಳಗೆ ಹೋಗಿ ಕಬೋರ್ಡ್‌ ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ 25 ಲಕ್ಷ ಹಣ ಇರಲಿಲ್ಲ. ಕೆಲಸದವರೇ ಹಣ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಅಮೃತಹಳ್ಳಿ ಠಾಣೆ ಪೊಲೀಸರಿಗೆ ಸುಬ್ಬಾರೆಡ್ಡಿ ಅವರು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ನೇಪಾಳಿ ದಂಪತಿ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ಖಚಿತ ಆಧಾರದ ಮೇರೆಗೆ ಕೆಂಗೇರಿಯ ಶಿರ್ಕೆ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿಯನ್ನು ಹಣದ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಐಷಾರಾಮಿ ಜೀವನ ನಡೆಸಲು ಹಣ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್‌ ಬಾಲಾಜಿ ಹಾಗೂ ಸಿಬ್ಬಂದಿ ತಂಡ ಕೈಗೊಂಡು ದಂಪತಿಯನ್ನು ಬಂಧಿಸಿ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News