ಬೆಂಗಳೂರು, ಮೇ 15- ನಗರದಲ್ಲಿ ಪೈಪ್‌ಲೈನ್ ಮತ್ತು ಒಳಚರಂಡಿ ದೋಷ ಪತ್ತೆಗೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಬಂದಿದೆ. ರೋಬೋಟಿಕ್ ಬಳಕೆಯ ಪರಿಣಾಮಕಾರಿಯಾಗಿ ನಗರದಲ್ಲಿ ರಸ್ತೆ ಅಗೆಯುವ ಅವಶ್ಯಕತೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ಆರು ತಿಂಗಳಲ್ಲಿ ಬೆಂಗಳೂರು ಜಲಮಂಡಳಿ 399 ಸ್ಥಳಗಳಲ್ಲಿ ರಸ್ತೆ ಅಗೆಯುವುದನ್ನು ತಪ್ಪಿಸಿ, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದ ಈ ರೋಬೋಟಿಕ್ ವ್ಯವಸ್ಥೆಯನ್ನು ಜಲಮಂಡಳಿ ಈಗ ಯಶಸ್ವಿಯಾಗಿ ಬಳಸುತ್ತಿದೆ. ಪೈಪ್‌ಲೈನ್ ಒಳಗೆ ಚಲಿಸುವ ಈ ಯಂತ್ರಗಳು ರಸ್ತೆ ಒಡೆದು ಪರಿಶೀಲನೆ ನಡೆಸುವ ಅವಶ್ಯಕತೆಯಿಲ್ಲದೆ, ಒಳಚರಂಡಿ ಹಾಗೂ ನೀರು ಸರಬರಾಜು ಮಾರ್ಗಗಳಲ್ಲಿನ ದೋಷಗಳನ್ನು ನಿಖರವಾಗಿ ಪತ್ತೆಹಚ್ಚುತ್ತಿವೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾಥ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ರಸ್ತೆ ಅಗೆಯುವುದರಿಂದ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಅದನ್ನು ತಪ್ಪಿಸಲು ಈ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇವೆ. ರೋಬೋಟಿಕ್ ಯಂತ್ರಗಳು ರಸ್ತೆ ಅಗೆಯದೇ ಪೈಪ್‌ಲೈನ್ ಒಳಗೆ ಸಂಚರಿಸಿ ದೋಷಗಳನ್ನು ಗುರುತಿಸುತಿವೆ ಎಂದು ಅವರು ತಿಳಿಸಿದ್ದಾರೆ.
ಪ್ರಮುಖ ಅಂಶಗಳು:ಕಳೆದ ಆರು ತಿಂಗಳಲ್ಲಿ 32,661 ಮೀಟರ್ (ಸುಮಾರು 32.66 ಕಿ.ಮೀ) ಉದ್ದದ ಪೈಪ್‌ಲೈನ್‌ಗಳನ್ನು ರೋಬೋಟಿಕ್ ತಂತ್ರಜ್ಞಾನದ ಮೂಲಕ ಪರಿಶೀಲಿಸಲಾಗಿದೆ.ಒಟ್ಟು 394 ದೋಷಗಳನ್ನು ನಿಖರವಾಗಿ ಪತ್ತೆಹಚ್ಚಿ ತ್ವರಿತ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.ಬಂದಿದ್ದ 404 ದೂರುಗಳಲ್ಲಿ 399 ದೂರುಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ.
ಉಳಿದ ಐದು ಪ್ರಕರಣಗಳಿಗೂ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.ನಗರದಲ್ಲಿ ಸುಗಮ ಸಂಚಾರ ಕಾಪಾಡುವುದರ ಜೊತೆಗೆ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಜಲಮಂಡಳಿಯ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲೂ ಜನಸ್ನೇಹಿ ಹಾಗೂ ತಂತ್ರಜ್ಞಾನ ಆಧರಿತ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
