ಬೆಂಗಳೂರು, ಮೇ 15- ರಾಜ್ಯದಲ್ಲಿ ಆರಂಭವಾಗಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಜೂನ್ 20 ರಿಂದ 29ರವರೆಗೆ ಬಿಎಲ್ಒಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಎಸ್ಐಆರ್ಗೆ ಸಂಬಂಧಿಸಿದಂತೆ 2026ರ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬೂತ್ ಮಟ್ಟದ ಅಧಿಕಾರಿಗಳಿಗೆ ಜೂನ್ 20ರಿಂದ 29ರವರೆಗೆ ತರಬೇತಿ ನೀಡಲಾಗುತ್ತದೆ.
ಇದಾದ ಬಳಿಕ ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಇದೇ ಅವಧಿಯಲ್ಲಿ ಮತಗಟ್ಟೆಗಳ ರೇಷನಲೈಸಿಂಗ್ ಪ್ರಕ್ರಿಯೆಯೂ ನಡೆಯಲಿದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತಿದ್ದು, ಅದೇ ದಿನದಿಂದ ಅಕ್ಟೋಬರ್ 3ರವರೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ತಿದ್ದುಪಡಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಬಳಿಕ ಎಲ್ಲಾ ಅರ್ಜಿಗಳ ಪರಿಶೀಲನೆ ನಡೆಸಿ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.ಚುನಾವಣಾ ಆಯೋಗದ ಮಾಹಿತಿಯಂತೆ, ಕರ್ನಾಟಕದಲ್ಲಿ ಈ ಪರಿಷ್ಕರಣೆ ಕಾರ್ಯಕ್ಕಾಗಿ ಒಟ್ಟು 59,050 ಬಿಎಲ್ಒಗಳನ್ನು ನಿಯೋಜಿಸಲಾಗಿದೆ.
ರಾಜಕೀಯ ಪಕ್ಷಗಳಿಂದ 25,284 ಬೂತ್ ಮಟ್ಟದ ಏಜೆಂಟ್ಗಳು ಈ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಸುಮಾರು 5.55 ಕೋಟಿ ಮತದಾರರು ಇದ್ದಾರೆ.ದೇಶದ ಮಟ್ಟದಲ್ಲಿ ಹಂತ- ಪ್ರಕ್ರಿಯೆಯಡಿ ಸುಮಾರು 3.94 ಲಕ್ಷ ಬಿಎಲ್ಒಗಳು ಹಾಗೂ 3.42 ಲಕ್ಷ ಬಿಎಲ್ಎಗಳು ಸೇರಿ 36.73 ಕೋಟಿ ಮತದಾರರ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಯೊಂದು ಮತಗಟ್ಟೆಗೂ ಬಿಎಲ್ಓಗಳನ್ನು ನೇಮಿಸಬೇಕು ಎಂದು ಮನವಿ ಮಾಡಿದೆ.
