Homeರಾಜ್ಯಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ, ಇಂದಿನಿಂದಲೇ ಜಾರಿ

ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ, ಇಂದಿನಿಂದಲೇ ಜಾರಿ

Private bus ticket prices to increase by 20-30%, effective from today

ಬೆಂಗಳೂರು, ಮೇ 15: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಖಾಸಗಿ ಬಸ್ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಂಧನ ವೆಚ್ಚ ಹೆಚ್ಚಳದಿಂದ ಕಾರ್ಯಾಚರಣೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ, ಖಾಸಗಿ ಬಸ್ ಟಿಕೆಟ್ ದರವನ್ನು ಇಂದಿನ ಮಧ್ಯರಾತ್ರಿಯಿಂದಲೇ ಶೇ.20ರಿಂದ 30ರಷ್ಟು ಹೆಚ್ಚಿಸಲು ಬಸ್ ಮಾಲೀಕರು ತೀರ್ಮಾನಿಸಿದ್ದಾರೆ. ಇದರಿಂದ ರಾಜ್ಯದಾದ್ಯಂತ ಲಕ್ಷಾಂತರ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀಳಲಿದ್ದು, ದಿನನಿತ್ಯ ಪ್ರಯಾಣಿಸುವ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೇ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಇದೀಗ ಸಾರಿಗೆ ವೆಚ್ಚವೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡೀಸೆಲ್ ದರ ನಿರಂತರ ಏರಿಕೆಯಿಂದ ಬಸ್‌ಗಳ ನಿರ್ವಹಣೆ, ಚಾಲಕರ ಹಾಗೂ ಸಿಬ್ಬಂದಿಗಳ ವೇತನ ಸೇರಿದಂತೆ ವಿವಿಧ ಕಾರ್ಯಾಚರಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಖಾಸಗಿ ಬಸ್ ಮಾಲೀಕರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಪರಿಷ್ಕರಣೆ ಮಾಡಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3.27 ರೂಪಾಯಿ ಹಾಗೂ ಡೀಸೆಲ್ ದರ 3.12 ರೂಪಾಯಿ ಏರಿಕೆಯಾಗಿದೆ. ಇದೇ ವೇಳೆ ದೇಶಾದ್ಯಂತ ಸಿಎನ್‌ಜಿ ದರವನ್ನೂ ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಟಿಕೆಟ್ ದರ ಏರಿಕೆಯಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ದೂರ ಪ್ರಯಾಣ ಮಾಡುವ ಸಾಮಾನ್ಯ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಬೆಲೆ ಏರಿಕೆ ಅಬ್ಬರದ ನಡುವೆ ಖಾಸಗಿ ಬಸ್ ದರ ಏರಿಕೆ ಸಾರ್ವಜನಿಕರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.

RELATED ARTICLES

Latest News