ಬಳ್ಳಾರಿ, ಜೂ.10- ಟೋಲ್ ಪ್ಲಾಜಾ ಬಳಿ ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಅತಿ ವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಸಜೀವವಾಗಿ ದಹನಗೊಂಡಿರುವ ಘಟನೆ ಆಂಧ್ರಪ್ರದೇಶದ ಜಾಜರಕಲ್ ಟೋಲ್ ಬಳಿ ಇಂದು ಬೆಳಗ್ಗೆ ನಡೆದಿದೆ.ಮೃತ ಲಾರಿ ಚಾಲಕರನ್ನು ದೀಕ್ಷಿತ್ ಎಂದು ಗುರುತಿಸಲಾಗಿದೆ.
ಬಳ್ಳಾರಿ-ಅನಂತಪುರ ಸಂಪರ್ಕದ ಈ ಟೋಲ್ ಬಳಿ ಇಂದು ಬೆಳಿಗ್ಗೆ 12 ಗಂಟೆ ಸುಮಾರಿನಲ್ಲಿ ದೀಕ್ಷಿತ್ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ 12 ಚಕ್ರದ ಲಾರಿಯೊಂದು ಮುಂದೆ ಚಲಿಸುತ್ತಿತ್ತು. ಈ ವೇಳೆ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಹಿಂದಿನಿಂದ ಏಕಾಏಕಿ ಮುಂದೆ ಹೋಗುತ್ತಿದ್ದ ಲಾರಿಗೆ ಅಪ್ಪಳಿಸಿದ ಪರಿಣಾಮ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕ್ಯಾಬಿನ್ನೊಳಗೆ ಚಾಲಕ ದೀಕ್ಷಿತ್ ಸಿಕ್ಕಿಕೊಂಡು ಕ್ಷಣಮಾತ್ರದಲ್ಲಿ ಸಜೀವವಾಗಿ ದಹನಗೊಂಡಿದ್ದಾನೆ.
ನೋಡ ನೋಡುತ್ತಿದ್ದಂತೆ ಎರಡೂ ಲಾರಿಗಳು ಹೊತ್ತಿ ಉರಿಯಲಾರಂಭಿಸಿದ್ದು, ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದೆ. ವಿಷಯ ತಿಳಿದು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ ಎರಡು ಲಾರಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದರಲ್ಲಿದ್ದ ವಸ್ತುಗಳು ಸುಟ್ಟು ಬೂದಿಯಾಗಿ ಅಪಾರ ನಷ್ಟ ಉಂಟಾಗಿದೆ.
ಕರ್ನಾಟಕಕ್ಕೆ ಸಮೀಪವಿರುವ ಈ ಟೋಲ್ ಪ್ಲಾಜಾದಲ್ಲಿ ದಿನನಿತ್ಯ ಸಾವಿರಾರು ಸರಕು ಸಾಗಣೆ ಲಾರಿಗಳು ಸಂಚರಿಸುತ್ತವೆ. ಬೆಳಿಗ್ಗೆ ಈ ದುರಂತ ಸಂಭವಿಸಿದ್ದರಿಂದ ಕೆಲಕಾಲ ವಾಹನ ಸಂಚಾರ ಕೂಡಾ ಅಸ್ತವ್ಯಸ್ಥಗೊಂಡಿತ್ತು. ಘಟನೆ ಕುರಿತಂತೆ ಆಂಧ್ರಪ್ರದೇಶದ ಹಿರೇಹಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
