ಬೆಂಗಳೂರು, ಜೂ.10 – ಉದ್ಯಾನವನಕ್ಕಾಗಿ ಮೀಸಲಿಟ್ಟಿದ್ದ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಅನಧಿಕೃತ ಶೆಡ್‌ಗಳನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿ, ಸುಮಾರು 2 ಕೋಟಿ ಮೌಲ್ಯದ ಜಾಗವನ್ನು ಪಾಲಿಕೆ ವಶಕ್ಕೆ ಪಡೆದಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೆ.ಪಿ.ನಗರ 2ನೇ ಹಂತದ ಕೆ.ಎಸ್.ಆರ್.ಟಿ.ಸಿ. ಲೇಔಟ್‌ನ 5ನೇ ಅಡ್ಡರಸ್ತೆಯ ಹೆಚ್.ಟಿ. ಲೈನ್ ಕೆಳಭಾಗದಲ್ಲಿರುವ ಉದ್ಯಾನವನದ ಜಾಗದಲ್ಲಿ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು.
ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತೆರವು ಕಾರ್ಯಾಚರಣೆ ಕೈಗೊಂಡರು.
ಪಾಲಿಕೆ ಮಾಹಿತಿಯ ಪ್ರಕಾರ, ಒಟ್ಟು 1,495 ಚದರ ಅಡಿ ವಿಸ್ತೀರ್ಣದ ಉದ್ಯಾನವನದ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು 2 ಕೋಟಿ ಆಗಿದೆ.
ಅಧಿಕಾರಿಗಳು ಅನಧಿಕೃತ ಶೆಡ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಜಾಗವನ್ನು ಪಾಲಿಕೆ ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಈ ಜಾಗದ ಮೇಲೆ ಮತ್ತೆ ಒತ್ತುವರಿ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆರವು ಕಾರ್ಯಾಚರಣೆಯಲ್ಲಿ ತೋಟಗಾರಿಕೆ ವಿಭಾಗದ ಅಧಿಕಾರಿಗಳು ಹಾಗೂ ಜೆ.ಪಿ.ನಗರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಭಾಗವಹಿಸಿದ್ದರು.
