Homeಜಿಲ್ಲಾ ಸುದ್ದಿಗಳುಹೊತ್ತಿ ಉರಿದ ಬಸ್‌‍, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಬಜಾವ್‌

ಹೊತ್ತಿ ಉರಿದ ಬಸ್‌‍, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಬಜಾವ್‌

Bus catches fire, 36 passengers rescued due to driver's punctuality

ಹಾಸನ,ಮೇ 16- ಚಲಿಸುತ್ತಿದ್ದ ಖಾಸಗಿ ಬಸ್‌‍ನ ಟೈಯರ್‌ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ಸು ಸುಟ್ಟು ಕರಕಲಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶಾಂತಿಗ್ರಾಮದ ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ತಡರಾತ್ರಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್‌ ಬಸ್‌‍ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 36 ಮಂದಿ ಪ್ರಯಾಣಿಸುತ್ತಿದ್ದರು. ತಡರಾತ್ರಿ ಶಾಂತಿಗ್ರಾಮ ಸಮೀಪ ಬರುತ್ತಿದ್ದಂತೆ ಬಸ್ಸಿನ ಹಿಂದಿನ ಟೈಯರ್‌ ದಿಢೀರ್‌ ಸ್ಫೋಟಗೊಂಡಿದೆ.

ಕೂಡಲೇ ಟೈಯರ್‌ ಭಾಗದಿಂದ ಬೆಂಕಿ ಕಾಣಿಸಿಕೊಂಡು ಇಡೀ ಬಸ್‌‍ಗೆ ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತುಕೊಂಡ ಚಾಲಕ ತಕ್ಷಣವೇ ಬಸ್‌‍ ಅನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಭಯಭೀತರಾದ ಪ್ರಯಾಣಿಕರು ತರಾತುರಿಯಲ್ಲಿ ಕೆಳಗಿಳಿದಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಬಸ್‌‍ಗೆ ಆವರಿಸಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದ ಕೆಲವೇ ಕ್ಷಣಗಳಲ್ಲಿ ಬಸ್‌‍ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ಲಗೇಜ್‌, ಮೊಬೈಲ್‌ ಭಸ್ಮ :
ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಪ್ರಯಾಣಿಕರ ಲಗೇಜ್‌, ಮೊಬೈಲ್‌ ಫೋನ್‌, ಹಣ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ. ಕೆಲ ಪ್ರಯಾಣಿಕರು ಕೈಗೆ ಸಿಕ್ಕ ಬ್ಯಾಗ್‌ ಮಾತ್ರ ತೆಗೆದುಕೊಂಡು ಇಳಿದಿದ್ದು, ಉಳಿದ ಸಾಮಾನುಗಳು ಸಂಪೂರ್ಣ ಸುಟ್ಟು ಹೋಗಿವೆ.

ಸ್ಫೋಟಕ್ಕೆ ಅತಿವೇಗ ಶಂಕೆ :
ಅತಿವೇಗ ಹಾಗೂ ರಸ್ತೆಯ ತಾಪಕ್ಕೆ ಟೈಯರ್‌ ಸ್ಫೋಟಗೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಹಾಸನದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಾಗಲೇ ಬಸ್‌‍ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು.

ಬಸ್‌‍ ಸಂಸ್ಥೆ ವ್ಯವಸ್ಥೆ ಮಾಡಿದ ಬೇರೆ ವಾಹನದಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ಚಾಲಕನ ಸಮಯಪ್ರಜ್ಞೆಯಿಂದ 36 ಜೀವಗಳು ಉಳಿದಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಘಟನೆ ಸಂಬಂಧ ಶಾಂತಿಗ್ರಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Latest News