ಮಂಡ್ಯ,ಜೂ.23- ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತನನ್ನೇ ಬಿಯರ್ ಬಾಟಲಿಯಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ತಡರಾತ್ರಿ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ. ಹಲಗೂರಿನ ಮೇದರ ಕಾಲೋನಿ ನಿವಾಸಿ ಮಂಜು (33) ಕೊಲೆಯಾದ ಯುವಕ.
ಪೊಲೀಸರ ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಬಾರ್ ಒಂದರಲ್ಲಿ ಮಂಜು, ಸಿದ್ದರಾಜು ಮತ್ತು ಮತ್ತೊಬ್ಬ ಸ್ನೇಹಿತ ಜೊತೆಯಾಗಿ ಮದ್ಯ ಸೇವಿಸಿದ್ದಾರೆ. ಬಾರ್ ಮುಚ್ಚಿದ ನಂತರ ಮೂವರೂ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಪಕ್ಕದಲ್ಲಿರುವ ಸೇತುವೆಯ ಬಳಿಯ ಖಾಲಿ ಜಾಗಕ್ಕೆ ತೆರಳಿದ್ದಾರೆ.
ರಾತ್ರಿ ಸುಮಾರು 11 ಗಂಟೆಯ ವೇಳೆ ಮಾತನಾಡುತ್ತಾ ಕುಳಿತಿದ್ದಾಗ ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಸಿದ್ದರಾಜು ಮತ್ತವನ ಸಹಚರ ಮಂಜು ಅಲಿಯಾಸ್ ಕಾಶಿಯ ಹೊಟ್ಟೆಗೆ ಬಿಯರ್ ಬಾಟಲಿಯಿಂದ ಬಲವಾಗಿ ಚುಚ್ಚಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ನಂತರ ಆರೋಪಿಗಳಾದ ಸಿದ್ದರಾಜು ಮತ್ತು ಆತನ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಷಯ ತಿಳಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ, ಡಿವೈಎಸ್‌ಪಿ ಯಶವಂತ್ ಕುಮಾರ್, ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್, ಪಿಎಸ್‌ಐ ಲೋಕೇಶ್ ನಿನ್ನೆ ತಡರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
