ಪಾವಗಡ,ಜೂ.23- ಮದ್ಯ ಸೇವನೆ ಮಾಡಲು ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ವಂತ ಮೊಮ್ಮಗ ನೇ ಅಜ್ಜಿಯನ್ನು ಗೋಡೆಗೆ ಕಬ್ಬಿಣದ ರೊಟ್ಟಿ ಹೆಂಚಿನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಗೌಡೇಟಿ ಗ್ರಾಮದಲ್ಲಿ ನಡೆದಿದೆ.
ಮಡಕಶಿರಾ ತಾಲೂಕಿನ ಆವಿದಾಲಗೊಂಡಿ ಗ್ರಾಮದ ಗಂಗಮ್ಮ (80) ಕೊಲೆಯಾದ ದುರ್ದೈವಿ. ಆರೋಪಿ ಮೂರ್ತಿ ಅಲಿಯಾಸ್ ನರಸಿಂಹಮೂರ್ತಿ ಎಂಬಾತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಕೊಲೆಯಾದ ಗಂಗಮನವರು ಆವಿದಾಲಗೊಂಡಿ ಗ್ರಾಮದಲ್ಲಿ ತಮ ಮೊದಲನೇ ಮಗನ ಕುಟುಂಬದ ಜೊತೆ ವಾಸವಿದ್ದರು. ತಾಲೂಕಿನ ಗೌಡೇಟಿ ಗ್ರಾಮದಲ್ಲಿ ವಾಸವಿರುವ ಅವರ ಎರಡನೇ ಮಗ ನಾರಾಯಣಪ್ಪ ಅವರ ಮನೆಯಲ್ಲಿ ಮೊಮಗನ ಮದುವೆ ಕಾರ್ಯಕ್ರಮವಿದ್ದ ಕಾರಣ, ಗಂಗಮನವರು 4 ದಿನಗಳ ಹಿಂದೆಯಷ್ಟೇ ಗೌಡೇಟಿಗೆ ಬಂದಿದ್ದರು.
ಮನೆಯಲ್ಲಿ ಅಜ್ಜಿ ಗಂಗಮನವರು ಇದ್ದಾಗ, ಅಲ್ಲಿಗೆ ಬಂದ ಮೂರ್ತಿ ಕುಡಿತದ ಮತ್ತಿನಲ್ಲಿ ಖರ್ಚಿಗೆ ಹಣ ಕೇಳಿದ್ದಾನೆ. ಅಜ್ಜಿಯು ಹಣ ಕೊಡಲು ನಿರಾಕರಿಸಿದಾಗ ತೀವ್ರ ಕೆರಳಿದ ಆರೋಪಿ ಅಜ್ಜಿಯನ್ನು ಸಾಯಿಸುವ ಉದ್ದೇಶದಿಂದಲೇ ಗೋಡೆಗೆ ತಲೆಯನ್ನು ಗುದ್ದಿ ಹಲ್ಲೆ ಮಾಡಿದ್ದಾನೆ.
ಅಷ್ಟಕ್ಕೇ ನಿಲ್ಲಿಸದೆ ಮನೆಯಲ್ಲಿದ್ದ ರೊಟ್ಟಿ ಸುಡುವ ಕಬ್ಬಿಣದ ಹೆಂಚಿನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಜ್ಜಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಗಾಯಾಳುವನ್ನು ಕುಟುಂಬಸ್ಥರು ಮತ್ತು ಅಕ್ಕಪಕ್ಕದವರು ತಕ್ಷಣ ಆಟೋದಲ್ಲಿ ಮಡಕಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ದಾರಿ ಮಧ್ಯೆ ರಾತ್ರಿ 10 ಗಂಟೆ ಸುಮಾರಿಗೆ ಮಡಕಶಿರಾ ಟೌನ್‌ನಲ್ಲಿ ಗಂಗಮ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೃತರ ಮತ್ತೊಬ್ಬ ಮೊಮಗ ತಿಪ್ಪೇಸ್ವಾಮಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
