ಕನಕಪುರ,ಜೂ.23- ದೇಗುಲ ಮಠದ ಪೀಠಾಧಿಪತಿಗಳಾದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ (84) ಅವರು ಲಿಂಗೈಕ್ಯರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಮೂರು ದಿನಗಳ ಹಿಂದೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.
ಮಠದ ಪೀಠಾಧಿಪತಿಗಳಾಗಿದ್ದ ಶ್ರೀಗಳು ಧರ್ಮ, ಶಿಕ್ಷಣ ಮತ್ತು ದಾಸೋಹ ಪರಂಪರೆಯನ್ನು ಬೆಳೆಸಿದ ಮಹನೀಯರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಜ್ಞಾನದ ಮೌಲ್ಯಗಳನ್ನು ಪಡೆದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಂಡಿದ್ದಾರೆ.

ಇಂದು ಬೆಳಿಗ್ಗೆ ದೇಗುಲ ಮಠದ ಆವರಣದಲ್ಲಿ ಶ್ರೀಗಳ ಕಳೇಬರವನ್ನು ಭಕ್ತಾದಿಗಳ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ವಿವಿಧ ಮಠದ ಶ್ರೀಗಳು, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಸೇರಿದಂತೆ ಮತ್ತಿತರ ಗಣ್ಯರು ಶ್ರೀಗಳ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಸುಮಾರು 700 ವರ್ಷಗಳ ಇತಿಹಾಸವಿರುವ ಶ್ರೀಮಠದ ಪೀಠಾಧ್ಯಕ್ಷರಾಗಿ ಶ್ರೀಗಳು ಎಲ್ಲಾ ವರ್ಗದ ಭಕ್ತರನ್ನು ಸಮಾನವಾಗಿ ಕಾಣುತ್ತಾ, ಶ್ರೀ ಮಠದ ಸೇವೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ಕಾರ್ಯವನ್ನು ಶ್ರೀ ಮಠದ ತ್ರಿವಿಧ ದಾಸೋಹ ಕೈಂಕರ್ಯದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸುವಲ್ಲಿ ಶ್ರೀಗಳ ಪಾತ್ರ ಮಹತ್ವದ್ದಾಗಿದೆ.
ಶ್ರೀಗಳ ನಿಧನಕ್ಕೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
