ಕನಕಪುರ, ಆ.26- ಕೌಟುಂಬಿಕ ಕಲಹದಿಂದ ಮನನೊಂದು ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನೂರು ಗ್ರಾಮದ ತೋಟವೊಂದರಲ್ಲಿ ಸೋಮವಾರ ರಾತ್ರಿ ನಡೆದಿದೆ.
ಉತ್ತರ ಕರ್ನಾಟಕ ಮೂಲದ ಮಹದೇವ (54) ಹಾಗೂ ಅವರ ಪತ್ನಿ ಮಾರಮ್ಮ (50) ಆತ್ಮಹತ್ಯೆ ಮಾಡಿಕೊಂಡವರು. ಹೆಗ್ಗನೂರು ಗ್ರಾಮದ ಶಿವು ಎಂಬುವವರ ತೋಟದಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಸಣ್ಣಪುಟ್ಟ ವಿಚಾರಗಳಿಗೂ ಇಬ್ಬರ ನಡುವೆ ಆಗಾಗ್ಗೆ ಮನಸ್ತಾಪ ಉಂಟಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮನನೊಂದು ಸೋಮವಾರ ರಾತ್ರಿ ವಿಷ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸಾತನೂರು ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಶಮಂತ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
