ಚಿಕ್ಕಮಗಳೂರು, ಆ.1- ಜಿಲ್ಲೆಯಲ್ಲಿ ಮುಂಗಾರು ಮಳೆ ಕಳೆದ ಎರಡು ದಿನಗಳಿಂದ ಚುರುಕುಗೊಂಡಿದ್ದು, ಮುಳ್ಳಯ್ಯನಗಿರಿ ತಪ್ಪಲಿನ ಬಳಿ ಗುಡ್ಡಕುಸಿತವಾಗಿದೆ.ಕುದುರೆಮುಖ, ಕೆಮಣ್ಣುಗುಂಡಿ, ಮುಳ್ಳಯ್ಯನಗಿರಿ, ಕಳಸ, ಮೂಡಿಗೆರೆ, ಕೊಟ್ಟಿಗೆಹಾರ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ವ್ಯಾಪ್ತಿಯಲ್ಲಿ ಮಳೆ ಜೋರಾಗಿದ್ದು ಚಿಕ್ಕಮಗಳೂರು ಮತ್ತು ತರೀಕೆರೆ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದು ಬಯಲು ಸೀಮೆಯಾದ ಕಡೂರು ಈವರೆಗೂ ಮಳೆ ಬಂದಿರುವುದಿಲ್ಲ.
ಪಶ್ಚಿಮ ಘಟ್ಟಗಳ ತಪ್ಪಲು ಹಾಗೂ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಗಣನೀಯವಾಗಿ ಹೆಚ್ಚಾಗಿದ್ದು, ಪ್ರಸಿದ್ದ ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿತ ಸಂಭವಿಸಿದೆ.
ಸಂಭಾವ್ಯ ಅಪಾಯವನ್ನು ತಡೆಯಲು ಕಾಂಕ್ರೀಟ್ ತಡೆಗೋಡೆ ನಿರ್ಮಿಸುತ್ತಿದ್ದ ಜಾಗದಲ್ಲೇ ಮಣ್ಣು ಕುಸಿದಿದೆ. ಈ ಮಾರ್ಗವು ಅತ್ತಿಗುಂಡಿ, ಮಹಲ್ ಸೇರಿದಂತೆ ಹತ್ತಾರು ಪ್ರಮುಖ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿರುವುದರಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ರಸ್ತೆಗೆ ಬಿದ್ದಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಮಳೆ ಬಿಡುವು ನೀಡದೆ ಮುಂದುವರಿದಿರುವುದರಿಂದ ಮತ್ತಷ್ಟು ಭಾಗಗಳಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ. ಈ ಭಾಗಕ್ಕೆ ಆಗಮಿಸುವ ಪ್ರವಾಸಿಗರು ಅತ್ಯಂತ ಜಾಗರೂಕರಾಗಿ ಮತ್ತು ಎಚ್ಚರಿಕೆಯಿಂದ ಪ್ರಯಾಣಿಸಲು ಜಿಲ್ಲಾಡಳಿತ ಕೋರಿದೆ.
ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಮರ ಬಿದ್ದಿದ್ದು ಮಳೆ ಮಧ್ಯೆಯೇ ಸ್ಥಳಿಯರಿಂದ ತೆರವು ಮಾಡಲಾಯಿತು.
ನದಿಗಳಲ್ಲಿ ಪ್ರವಾಹ :
ಪುಷ್ಯ ಮಳೆ ಅಬ್ಬರಕ್ಕೆ ಶೃಂಗೇರಿ ತಾಲೂಕು ತತ್ತರಗೊಂಡಿದ್ದು, ತುಂಗಾಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಶೃಂಗೇರಿ ಪಟ್ಟಣದ ಹಲವು ಪ್ರದೇಶಗಳು ಜಲಾವೃತವಾಗಿದೆ. ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು ತುಂಗಾ ನದಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಆಗಿದೆ.
ಮೂರು ತಾಲೂಕುಗಳು ಶಾಲಾ ಕಾಲೇಜು ರಜೆ :
ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹ ಹಾಗೂ ಭೂಕುಸಿತದ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆಯ ನರಸಿಂಹರಾಜಪುರ, ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕುಗಳ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
