ಬಾಗೇಪಲ್ಲಿ, ಮಾ. 9 – ಮಾರುತಿ ಕಾರಿನಲ್ಲಿ ವ್ಯಕ್ತಿಯೊಬ್ಬರು ಸುಟ್ಟು ಸಜೀವ ದಹನವಾಗಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮತರನ್ನು ತಾಲ್ಲೂಕಿನ ಪೆನುಮಲೆ ಗ್ರಾಮದವರಾಗಿದ್ದು,ಉದಯ್ ಕುಮಾರ್ (65) ಎಂದು ಗುರುತಿಸಲಾಗಿದೆ.
ಸ್ಥಳೀಯರ ಮಾಹಿತಿಯಂತೆ, ಬಾಲರೆಡ್ಡಿಪಲ್ಲಿ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿ ಉದಯ್ ಕುಮಾರ್ ಅವರು ಕಳೆದ ಹಲವು ವರ್ಷಗಳಿಂದ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ತಮ ತಾಯಿಯನ್ನು ಭೇಟಿ ಮಾಡಲು ಸ್ವಗ್ರಾಮ ಪೆನುಮಲೆಗೆ ಬಂದಿದ್ದ ಅವರು, ಬಳಿಕ ಮತ್ತೆ ಬೆಂಗಳೂರಿಗೆ ತೆರಳುವ ವೇಳೆ ಬಾಲರೆಡ್ಡಿಪಲ್ಲಿ ಸಮೀಪ ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆ ನಡೆಸಲಾಗಿದೆ.
ಈ ಘಟನೆ ಆತ್ಮಹತ್ಯೆಯೋ ಅಥವಾ ಆಕಸಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರ್ಘಟನೆ ನಡೆದಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕಾರಣ ಹಾಗೂ ಘಟನೆಯ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮತ್ತು ಕುತೂಹಲ ಉಂಟಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
