ಚಾಮರಾಜನಗರ,ಫೆ.25- ಮದುವೆ ಆರತಕ್ಷತೆಯಲ್ಲಿ ಫೋಟೊ ತೆಗೆಯುತ್ತಿದ್ದ ಫೋಟೊಗ್ರಾಫರ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.ಬೊಮನಹಳ್ಳಿ ಗ್ರಾಮದ ನಿವಾಸಿ ಮೂರ್ತಿ ಮೃತಪಟ್ಟ ಫೋಟೊಗ್ರಾಫರ್.
ಗುಂಡ್ಲುಪೇಟೆಯಲ್ಲಿ ನಡೆಯುತ್ತಿದ್ದ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಫೋಟೊ ತೆಗೆಯುತ್ತಿದ್ದಾಗ ಮೂರ್ತಿ ಹಠಾತ್ತನೇ ಕುಸಿದುಬಿದ್ದಿದ್ದು, ಕೊನೆಯುಸಿರೆಳೆದಿದ್ದಾರೆ. ಕುಸಿದು ಬೀಳುತ್ತಿದ್ದಂತೆ ಸಹ ಫೋಟೊಗ್ರಾಫರ್‌ಗಳು ಹಾಗೂ ಮದುವೆಗೆ ಆಗಮಿಸಿದ್ದ ಜನರು ಏನಾಯಿತೆಂದು ನೋಡುವಷ್ಟರಲ್ಲೇ ಫೋಟೊಗ್ರಾಫರ್ ಪ್ರಾಣಪಕ್ಷಿ ಹಾರಿಹೋಗಿದೆ.
ಈ ಸಂಬಂಧ ಗುಂಡ್ಲುಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಬಂಧು ಬಳಗ, ವಧು-ವರನ ಕಡೆಯವರಿಗೆ ಈ ಒಂದು ದುರ್ಘಟನೆ ದಿಗ್ಭ್ರಾಂತಿ ಮೂಡಿಸಿದೆ.ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ದುರಂತದ ನಡುವೆ ವಿವಾಹ ಕಾರ್ಯ ಮುಂದುವರೆಯಿತು ಎಂದು ತಿಳಿದು ಬಂದಿದೆ.
