ಹಾಸನ,ಫೆ.20- ನಗರದ 80 ಫೀಟ್ ರಸ್ತೆಯಲ್ಲಿ ಕೆಲ ಯುವಕರು ಬೈಕ್‌ಗಳಲ್ಲಿ ಅಪಾಯಕಾರಿ ವೀಲ್ಹಿಂಗ್ ಪ್ರದರ್ಶನಮಾಡುತ್ತಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ರಸ್ತೆಯಲ್ಲಿ ಹೆಚ್ಚು ವಾಹನ ಸಂಚಾರ ಮತ್ತು ಜನನಿಬೀಡ ಪ್ರದೇಶದಲ್ಲೇ ಯುವಕರು ಜೀವಕ್ಕೆ ಅಪಾಯಕಾರಿ ಯಾದ ರೀತಿಯಲ್ಲಿ ಬೈಕ್ಗಳನ್ನು ಚಲಾಯಿಸಿದ್ದು, ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ರೋಡ್ ಮಾಡುವ ಉದ್ದೇಶದಿಂದಲೇ ಈ ರೀತಿಯ ಅಪಾಯಕಾರಿ ಸಾಹಸಕ್ಕಿಳಿದಿದ್ದಾರೆ. ಇದರಿಂದ ಸಾರ್ವಜನಿಕ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಘಟನೆಯ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ದೊರಕುತ್ತಿದ್ದಂತೆಯೇ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದರು. ಆದರೆ, ಪೊಲೀಸರು ಬರುವುದನ್ನು ಗಮನಿಸಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮುಂಜಾನೆಯಿಂದಲೇ 80 ಫೀಟ್ ರಸ್ತೆಯಲ್ಲಿ ಪುಂಡ ಯುವಕರು ವೀಲ್ಹಿಂಗ್ ಮಾಡುತ್ತಾರೆ. ಸಾಕಷ್ಟು ಬಾರಿ ದೂರು ನೀಡಿದರೂ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡ ರಾಜೇಶ್ ದೂರಿದ್ದಾರೆ.
ಇತ್ತೀಚೆಗೆ ಯುವಕರು ಗಾಂಜಾ ಸಿಗರೇಟ್ ಸೇರಿದಂತೆ ಇತರೆ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ವೀಲಿಂಗ್ ಸೇರದಂತೆ ಇತರೆ ಜನವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಮುಸ್ಲಿಂ ಮುಖಂಡಮುಬಷಿರ್ ಅಹಮದ್ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.ವೀಲ್ಹಿಂಗ್ ಸೇರಿದಂತೆ ಅಪಾಯಕಾರಿ ಬೈಕ್ ಪ್ರದರ್ಶನಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ವೀಲ್ಹಿಂಗ್‌ನಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗು ವುದಲ್ಲದೆ, ಯುವಕರ ಭವಿಷ್ಯಕ್ಕೂ ಧಕ್ಕೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
