ಬೆಳಗಾವಿ,ನ.27- ಆಸ್ತಿ ವಿವಾದ ಹಾಗೂ ಕೌಟುಂಬಿಕ ವಿಚಾರಕ್ಕೆ ಸಂಬಂಧಿಕರ ನಡುವೆ ಗಲಾಟೆ ನಡೆದು ಅತ್ತೆ ಹಾಗೂ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮುರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಬಸವ್ವಭೀಮಪ್ಪ ನಾಯ್ಕರ(60) ಮತ್ತು ರಮೇಶ ಹಣಮಂತ ನಾಯ್ಕರ (29) ಕೊಲೆಯಾದ ದುರ್ದೈವಿಗಳು. ಬಸವ್ವನ ಅಕ್ಕ ಹಾಗೂ ತಂಗಿ ಮಕ್ಕಳಾದ ರವಿ ಮತ್ತು ಪುಂಡಲೀಕ ಕೊಲೆ ಆರೋಪಿಗಳಾಗಿದ್ದು, ತಲೆ ಮರೆಸಿಕೊಂಡಿರುವ ಅವರಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸುಮಾರು ವರ್ಷಗಳಿಂದ 10 ಎಕರೆ ಜಮೀನು ಹಂಚಿಕೆ ವಿಚಾರಕ್ಕೆ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರ ನಡುವೆ ಜಗಳ ನಡೆಯುತ್ತಲೇ ಇತ್ತು. ಇದರ ನಡುವೆಯೇ ಕೌಟುಂಬಿಕ ವಿಚಾರವಾಗಿ ಇವರುಗಳ ಮಧ್ಯೆ ಸಣ್ಣಪುಟ್ಟ ಗಲಾಟೆಯಾಗುತ್ತಿತ್ತು. ಜಿಲ್ಲೆಯ ಯರಹಟ್ಟಿ ತಾಲ್ಲೂಕಿನ ಜೀವಾಪುರ ಗ್ರಾಮದ ಬಸವ್ವ ಅವರ ಮನೆಗೆ ರಾತ್ರಿ ಬಂದಿದ್ದ ಸಂಬಂಧಿಕರ ನಡುವೆ ಆಸ್ತಿ ವಿಚಾರವಾಗಿ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡಿದ್ದು, ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ಹೋಗಿದೆ.
ಆ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದು, ಒಂದು ಹಂತದಲ್ಲಿ ಬಸವ್ವ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ರಮೇಶ ಅದನ್ನು ತಡೆಯಲು ಮಧ್ಯಪ್ರವೇಶಿಸಿದಾಗ ಆತನ ಮೇಲೆಯೂ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಜೀವಾಪುರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೊಲೆಯಾದವರು ಸಂಬಂಧದಲ್ಲಿ ಅತ್ತೆ-ಅಳಿಯ ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮಡಿವಾಳರ ಹಾಗೂ ಮುಡಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಸೂಕೋ ತಂಡ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆಸ್ತಿ ವಿಚಾರವಾಗಿ ಕುಟುಂಬಸ್ಥರ ನಡುವೆ ಮೊದಲಿನಿಂದಲೂ ವಿವಾದವಿತ್ತು. ಇದೇ ದ್ವೇಷ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿಗಳ ಬಂಧನದ ಬಳಿಕ ಕೊಲೆಗೆ ನಿಖರ ಕಾರಣವೇನು ಎಂಬುದು ಗೊತ್ತಾಗಲಿದೆ ಎಂದು ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
