ಬೆಂಗಳೂರು,ನ.27- ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬೆದರಿಕೆ ಹಾಕುತ್ತಿದ್ದ ರೌಡಿಯೊಬ್ಬನನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿ.ಚನ್ನಸಂದ್ರದ ಬಚ್ಚಣ್ಣಲೇಔಟ್‌ನ 3ನೇ ಕ್ರಾಸ್‌ನ ನಿವಾಸಿ ಶಿವಪ್ರಸಾದ್ ಅಲಿಯಾಸ್ ಶಿವು ಅಲಿಯಾಸ್ ಟಿಂಕು ಬಂಧಿತ ರೌಡಿ. ಈತನ ಮೇಲೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿ ಚಟುವಟಿಕೆಗಳ ಜೊತೆಗೆ ಕೋಳಿ ಮೊಟ್ಟೆ ವ್ಯಾಪಾರವನ್ನು ಮಾಡುತ್ತಿದ್ದ ಎಂದು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಗೊತ್ತಾಗಿದೆ.
ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ನಿಗಾ ವಹಿಸಿದ್ದಾಗ ಈ ರೌಡಿಯನ್ನು ಬಂಧಿಸಲಾಗಿದೆ.
ಮತ್ತೆ ನಾಲ್ಕು ರೌಡಿಗಳ ಸೆರೆ
ಬೆಂಗಳೂರು,ನ.27- ಕಾರ್ಯಾ ಚರಣೆಯನ್ನು ತೀವ್ರಗೊಳಿಸಿರುವ ರೌಡಿ ನಿಗ್ರಹದಳದ ಪೊಲೀಸರು ಮತ್ತೆ ನಾಲ್ಕು ಮಂದಿ ರೌಡಿಗಳನ್ನು ಬಂಧಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯ ರೌಡಿಗಳಾದ ರಕ್ಷಿತ್‌ಕುಮಾರ್ ಅಲಿಯಾಸ್ ಹರ್ಷ(36) ಮತ್ತು ದೀಪು(36), ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪ್ರಶಾಂತ್ ಆರ್ ಅಲಿಯಾಸ್ ಗೊಜ್ಜ(24) ಹಾಗೂ ಹೈಗ್ರೌಂಡ್ ಪೊಲೀಸ್ ಠಾಣೆಯ ಹರ್ಬಾಸ್ ಅಹಮ್ಮದ್ ಅಲಿಯಾಸ್ ಅರ್ಬಾಜ್(30) ಬಂಧಿತ ರೌಡಿಗಳು.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಹಲ್ಲೆ, ಕೊಲೆ, ಕೊಲೆಯತ್ನ, ದರೋಡೆ ಮುಂತಾದ ಪ್ರಕರಣಗಳಲ್ಲಿ ನ್ಯಾಯಾಲಯದ ಉದ್ಘೋಷಣೆ/ಜಾಮೀನುರಹಿತ ವಾರೆಂಟ್‌ಗಳಲ್ಲಿ ವಿಚಾರಣೆಯಾಗದೆ ಈ ರೌಡಿಗಳು ತಲೆತಪ್ಪಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರುಗಳನ್ನು ಪತ್ತೆಹಚ್ಚಿ ಬಂಧಿಸಿರುವ ರೌಡಿ ನಿಗ್ರಹದಳ ಪೊಲೀಸರು ಮುಂದಿನ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಒಪ್ಪಿಸಿದ್ದಾರೆ. ರೌಡಿ ನಿಗ್ರಹ ದಳದ ಪೊಲೀಸರು ನಿನ್ನೆ 9 ಮಂದಿ ರೌಡಿಗಳನ್ನು ಬಂಧಿಸಿದ್ದರು.
ಲಾಡ್ಜ್‌ನಲ್ಲಿ ಪ್ರೇಯಸಿ ಕೊಲೆ
ಬೆಂಗಳೂರು,ನ.27- ಪ್ರಿಯಕರನಿಂದಲೇ ಪ್ರೇಯಸಿಯ ಭೀಕರ ಕೊಲೆ ನಡೆದಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಗಂಗಾ ಕೊಲೆಯಾದ ಯುವತಿ. ಆರೋಪಿ ಗೋಕುಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇರಳ ಮೂಲದವರಾದ ಗಂಗಾ ಹಾಗೂ ಗೋಕುಲ್ ನರ್ಸಿಂಗ್ ವ್ಯಾಸಂಗ ಮುಗಿಸಿದ್ದು, ಉದ್ಯೋಗ ಹುಡುಕುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಗಂಗಾ ಹಾಗೂ ಗೋಕುಲ್ ಪ್ರೀತಿಸುತ್ತಿದ್ದರು.
ಇವರಿಬ್ಬರೂ ಕಾಟನ್ ಪೇಟೆಯ ರೆಜೆನ್ಸಿ ಲಾಡ್ಜ್‌ಗೆ ಬಂದು ಕೊಠಡಿ ಪಡೆದು ಕೊಂಡಿದ್ದಾರೆ. ಗೋಕುಲ್‌ಗೆ ಗಂಗಾ ಮೇಲೆ ಅನುಮಾನ. ಬೇರೆ ಯುವಕನ ಜೊತೆ ಸ್ನೇಹ ಬೆಳೆಸಿದ್ದಾಳೆಂಬ ಶಂಕೆಯಿಂದ ಆಕೆಯ ಜೊತೆ ಜಗಳವಾಡಿದ್ದಾನೆ. ಇವರಿಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಆ ಸಂದರ್ಭದಲ್ಲಿ ಗೋಕುಲ್ ಚಾಕುವಿನಿಂದ ಗಂಗಾಗೆ ಕೊಠಡಿಯೊಳಗೆ ಮನಬಂದಂತೆ ಇರಿದಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಆಕೆ ಕೊಠಡಿಯಿಂದ ಹೊರಗೆ ಬಂದಳಾದರೂ ತೀವ್ರ ರಕ್ತಸ್ರಾವದಿಂದ ಮೆಟ್ಟಿಲುಗಳ ಮೇಲೆಯೇ ಕುಸಿದುಬಿದ್ದು ಮೃತಪಟ್ಟಿದ್ದಾಳೆ.
ಸುದ್ದಿ ತಿಳಿಯುತ್ತಿದ್ದಂತೆ ಕಾಟನ್‌ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಗೋಕುಲ್‌ನನ್ನು ವಶಕ್ಕೆ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಯಶವಂತ ಪುರದ ಲಾಡ್ಜ್‌ನ ಕೊಠಡಿಯ ಕಿಟಕಿಯಿಂದ ಮಹಿಳಾ ಉದ್ಯೋಗಿಯನ್ನು ತಳ್ಳಿ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಲಾಡ್ಜ್‌ನಲ್ಲಿಯೇ ನಡೆದಿರುವುದು ಆತಂಕಕ್ಕೀಡು ಮಾಡಿದೆ.
