ಬೆಂಗಳೂರು,ನ.27- ಪಾರ್ಕಿಂಗ್ ಸ್ಥಳಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡಲು ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರೋಪಿಯೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ ಎಂಟು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರ್ಟಿ ನಗರದ ನಿವಾಸಿ ಮಹಮ್ಮದ್ ಸಲ್ಮಾನ್ (36) ಬಂಧಿತ ಆರೋಪಿ. ಈತನಿಂದ 4.70 ಲಕ್ಷ ರೂ. ಮೌಲ್ಯದ ಎಂಟು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಾಮುಂಡಿನಗರದ 6ನೇ ಕ್ರಾಸ್ ನಿವಾಸಿ ಫಾತಿಮಾ ಎಂಬುವರು ನಾಗವಾರದ ಅಂಗಡಿಯೊಂದರ ಮುಂಭಾಗ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಕಾರ್ಯನಿಮಿತ್ತ ಹೋಗಿದ್ದು, ಕೆಲ ಸಮಯದ ನಂತರ ವಾಪಸ್ ಬಂದು ನೋಡಿದಾಗ ಅವರ ವಾಹನ ಇರಲಿಲ್ಲ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಎಚ್ಎಸ್ಆರ್ ಲೇ ಔಟ್ ಫಾರೆಸ್ಟ್ ಆಫೀಸ್ ಮುಂಭಾಗದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಠಾಣೆಗೆ ಕರೆದೊಯ್ದು ಸುದೀರ್ಘ ವಿಚಾರಣೆ ನಡೆಸಿದಾಗ ನಗರದ ಸೊನ್ನಪನಹಳ್ಳಿ, ಆಸ್ಟಾರ್ನ್ ರಸ್ತೆ, ಹೆಚ್ಬಿಆರ್ ಲೇಔಟ್, ಟಿಸಿ ಪಾಳ್ಯ ಮುಖ್ಯರಸ್ತೆ, ನಾಗವಾರ, ಭುವನೇಶ್ವರಿ ನಗರ, ಹೆಬ್ಬಾಳ ರೈಲ್ವೆ ನಿಲ್ದಾಣ ಹತ್ತಿರ ಹಾಗೂ ಇನ್ನಿತರ ಕಡೆಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಬೀಗ ಮುರಿದು ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ನಾಗವಾರ, ವಯ್ಯಾಲಿಕಾವಲ್ ಲೇಔಟ್ ಎಚ್ಕೆಬಿಕೆ ಕಾಲೇಜ್ ಕಾಂಪೌಂಡ್ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಸ್ಥಳದಲ್ಲಿದ್ದ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಬಂಧನದಿಂದ ಗೋವಿಂದಪುರ ಪೊಲೀಸ್ ಠಾಣೆಯ ಮೂರು, ಭಾರತಿನಗರ, ಚಿಕ್ಕಜಾಲ, ಅಮೃತಹಳ್ಳಿ, ಕೆ.ಆರ್.ಪುರಂ ಹಾಗೂ ಬಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯ ಪ್ರಕರಣ ಸೇರಿದಂತೆ ಒಟ್ಟು ಎಂಟು ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇನ್ಸ್ಪೆಕ್ಟರ್ ಕಿರಣ್ ಹಾಗೂ ಸಿಬ್ಬಂದಿ ತಂಡವು ಯಶಸ್ವಿಯಾಗಿದೆ.
