Homeಸಂಪಾದಕೀಯ-ಲೇಖನಗಳುಕನಕ ತೋರಿದ ಕಿಂಡಿಗಳಲ್ಲಿ ಬದುಕಿನ ದರ್ಶನ

ಕನಕ ತೋರಿದ ಕಿಂಡಿಗಳಲ್ಲಿ ಬದುಕಿನ ದರ್ಶನ

ಕನಕದಾಸ ಜಯಂತಿ ಕೇವಲ ಒಬ್ಬ ಸಂತಕವಿಯ ಸ್ಮರಣೆಯ ದಿನವಲ್ಲ; ಅದು ನಮ್ಮ ಬದುಕನ್ನು ನಾವು ಒಮ್ಮೆ ಹಿಂದಿರುಗಿ ನೋಡಿಕೊಳ್ಳಬೇಕಾದ ದಿನ. ಐದು ಶತಮಾನಗಳ ಹಿಂದಿನ ಕನಕದಾಸರ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಜೀವಂತವಾಗಿರುವುದಕ್ಕೆ ಕಾರಣ ಅವು ಕೇವಲ ಭಕ್ತಿಗೀತೆಗಳಲ್ಲ, ಅವು ಬದುಕಿನ ಸತ್ಯವನ್ನು ಪ್ರಶ್ನಿಸುವ, ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಹಾಗೂ ಸಮಾಜದ ಓರೆಕೋರೆಗಳನ್ನು ತಿದ್ದುವ ಚಿಂತನೆಯ ಕಿಡಿಗಳಾಗಿವೆ.

ಶ್ರೀ ಕನಕದಾಸರು ಹರಿದಾಸ ಸಾಹಿತ್ಯವನ್ನು ಬಹುಮುಖವಾಗಿ ಶ್ರೀಮಂತಗೊಳಿಸಿದ ಮಹನೀಯರು. ದಾಸರಾಗಿ, ಕವಿಯಾಗಿ, ಅನುಭಾವಿ ಯಾಗಿ, ಸಮಾಜ ಚಿಂತಕರಾಗಿ ಅವರು ನಾಡು?ನುಡಿಗೆ ಸಲ್ಲಿಸಿದ ಸೇವೆ ಅಪೂರ್ವ. ಬಹುಮುಖ ಪ್ರತಿಭೆ, ಅಪಾರ ಸಾಧನೆ ಮತ್ತು ವಿಶಾಲ ಮಾನವೀಯ ದೃಷ್ಟಿಯ ಕನಕದಾಸರು ಹರಿದಾಸ ಪರಂಪರೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದವರು.

ದಾಸಸಾಹಿತ್ಯವು ವಿಶ್ವಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಸಾಹಿತ್ಯ ಪರಂಪರೆ. ಲೌಕಿಕ ಸೆಳೆತದಿಂದ ದೈವವಿಮುಖರಾದವರನ್ನು ದೈವಮುಖಿಗಳನ್ನಾಗಿಸುವುದರ ಜತೆಗೆ, ಕೇವಲ ಧಾರ್ಮಿಕ ಆಚರಣೆಗಳಲ್ಲಿ ಮುಳುಗಿ ಸಮಾಜದಿಂದ ದೂರವಾಗಿದ್ದವರನ್ನು ಮತ್ತೆ ಸಮಾಜದತ್ತ ಮುಖಮಾಡಿಸುವ ಕಾರ್ಯವನ್ನೂ ಅದು ಮಾಡಿತು. ಭಗವಂತನ ಬಾಗಿಲು ಎಲ್ಲರಿಗೂ ತೆರೆದಿದೆ ಎಂಬ ಆಧ್ಯಾತ್ಮಿಕ ಸತ್ಯವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಸಿದ ಈ ಸಾಹಿತ್ಯ ಸಂಗೀತಕ್ಕೆ ಆಧ್ಯಾತ್ಮಿಕ ಸೊಗಡು ನೀಡಿತು, ಕನ್ನಡ ಭಾಷೆಗೆ ಪ್ರಾಸಾದಿಕತೆ ತಂದಿತು, ಭಕ್ತಿಯ ಹೊಳೆಯನ್ನು ನಿತ್ಯಜೀವನದೊಳಗೆ ಹರಿಸಿತು.

ಕನಕವನ್ನು ತೊರೆದು ಹರಿಯ ದಾಸರಾದ ಕನಕ
ಕನಕದಾಸರ ವ್ಯಕ್ತಿತ್ವದಲ್ಲಿ ಒಂದು ವಿಶಿಷ್ಟ ಪರಿವರ್ತನೆಯಿದೆ. ಅವರು ಕೇವಲ ಱಕನಕದಾಸೞರಲ್ಲ; ಕನಕದ ಮೇಲಿನ ದಾಸ್ಯವನ್ನು ತೊರೆದು ಹರಿಯ ದಾಸರಾದವರು. ಶ್ರೀಪುರಂದರದಾಸರು ನವಕೋಟಿ ಸಂಪತ್ತನ್ನು ತೊರೆದು ನಾರಾಯಣನನ್ನು ಹಿಡಿದರೆ, ಕನಕದಾಸರು ಱಕನಕೞವನ್ನು ತೊರೆದು ಅದರ ಅಧಿಪತಿಯಾದ ಶ್ರೀಹರಿಯ ದಾಸರಾದರು.

ಅರಸನಾಗಿ ಬದುಕಬಲ್ಲ ಸಾಮರ್ಥ್ಯವಿದ್ದವರು ದಾಸನಾಗಿ ಬದುಕುವುದನ್ನು ಆಯ್ಕೆ ಮಾಡಿಕೊಂಡರು. ಅಧಿಕಾರ, ಸಂಪತ್ತು, ಪ್ರತಿಷ್ಠೆ ಇವೆಲ್ಲಕ್ಕಿಂತ ಆತ್ಮಸಾಕ್ಷಾತ್ಕಾರ ಮತ್ತು ಭಗವದ್ಭಕ್ತಿಯೇ ಶ್ರೇಷ್ಠ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿದರು. ಆದ್ದರಿಂದಲೇ ಕನಕದಾಸರು ದಾಸರಲ್ಲಿ ಕವಿ; ಕವಿಗಳಲ್ಲಿ ದಾಸ. ಮುಂಚೆ ಶಸ್ತ್ರ ಹಿಡಿದು ಕಾದಾಡಬಲ್ಲವರಾಗಿದ್ದ ಅವರು ಬಳಿಕ ಶಾಸ್ತ್ರತತ್ತ್ವಗಳನ್ನು ಹಾಡಬಲ್ಲ ಜ್ಞಾನಿಗಳಾದರು. ಅವರ ಸಾಹಿತ್ಯದಲ್ಲಿ ಭಕ್ತಿ ಮಾತ್ರವಲ್ಲ; ಜೀವನಾನುಭವ, ಸಾಮಾಜಿಕ ವಿಮರ್ಶೆ, ವೈಚಾರಿಕತೆ, ತಾತ್ತ್ವಿಕತೆ ಮತ್ತು ಮಾನವೀಯ ಕಳಕಳಿ ಸಮನ್ವಯಗೊಂಡಿವೆ.

ಪಂಪ, ಕುಮಾರವ್ಯಾಸ, ಕುಮಾರವಾಲ್ಮೀಕಿ, ಲಕ್ಷ್ಮೀಶ ಮೊದಲಾದ ಮಹಾಕವಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರೂ, ಕನಕದಾಸರ ಕೃತಿಗಳು ಪಡೆದ ಜನಪ್ರಿಯತೆಯ ಸ್ವರೂಪ ವಿಶಿಷ್ಟ. ಅವರ ಕಾವ್ಯ ಜನಸಾಮಾನ್ಯರ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿತು. ಅದಕ್ಕೆ ಮುಖ್ಯ ಕಾರಣ ಅವರ ಸಾಹಿತ್ಯದಲ್ಲಿ ಭಕ್ತಿ ಮತ್ತು ಸಾಮಾಜಿಕ ಕಳಕಳಿ ಒಂದಾಗಿ ಹರಿದಿರುವುದು.

ಕನಕದಾಸರು ನೀಡಿದ ತಾತ್ತ್ವಿಕ ಚಿಂತನೆ
ಕನಕದಾಸರ ತತ್ತ್ವಚಿಂತನೆಯ ಕೇಂದ್ರದಲ್ಲಿ ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮದ ಸ್ವರೂಪದ ಹುಡುಕಾಟವಿದೆ. ಹಣವಿದ್ದರೆ ಸುಖ, ಅಧಿಕಾರವಿದ್ದರೆ ಸುಖ, ಲೌಕಿಕ ಸೌಲಭ್ಯಗಳಿದ್ದರೆ ಸುಖ ಎಂಬ ಸಾಮಾನ್ಯ ಗ್ರಹಿಕೆಯನ್ನು ಮೀರಿ ಯೋಚಿಸುವಂತೆ ಕನಕದಾಸರು ಮನಸ್ಸಿಗೆ ಕರೆ ನೀಡುತ್ತಾರೆ. ಮಾಯೆ, ಅಜ್ಞಾನ, ಅವಿದ್ಯೆ ಮನುಷ್ಯನನ್ನು ಸತ್ಯದಿಂದ ದೂರವಿಡುತ್ತವೆ. ಅವುಗಳನ್ನು ಮೀರುವ ಜ್ಞಾನ ಮತ್ತು ಭಕ್ತಿಯೇ ಬದುಕಿನ ಸಾರ್ಥಕತೆಯ ದಾರಿ ಎಂಬುದು ಅವರ ಚಿಂತನೆಯ ಸಾರ.

-ಡಾ. ಗುರುರಾಜ ಪೋಶೆಟ್ಟಿಹಳ್ಳಿ

RELATED ARTICLES

Latest News