Homeಬೆಂಗಳೂರುಜಾತಿನಿಂದನೆ ಕಿರುಕುಳ; 10 ಲಕ್ಷಕ್ಕೆ ಬೇಡಿಕೆ ಹಣ್ಣಿನ ವ್ಯಾಪಾರಿ ಆತ್ಮ*ಹತ್ಯೆ

ಜಾತಿನಿಂದನೆ ಕಿರುಕುಳ; 10 ಲಕ್ಷಕ್ಕೆ ಬೇಡಿಕೆ ಹಣ್ಣಿನ ವ್ಯಾಪಾರಿ ಆತ್ಮ*ಹತ್ಯೆ

ಬೆಂಗಳೂರು,ಜೂ.20-ವಿನಾಕಾರಣ ನನ್ನ ಮೇಲೆ ಜಾತಿನಿಂದನೆ ದೂರು ನೀಡಲಾಗಿದೆ. ಅಲ್ಲದೇ ಮಹಿಳೆಯೊಬ್ಬರು 10 ಲಕ್ಷಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹಣ್ಣಿನ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚನ್ನಸಂದ್ರದ ಎಕೆಜಿ ಬಡಾವಣೆ ನಿವಾಸಿ ಪಾಪಣ್ಣ (40) ಆತಹತ್ಯೆ ಮಾಡಿಕೊಂಡಿರುವ ಹಣ್ಣಿನ ವ್ಯಾಪಾರಿ.

2021 ರಲ್ಲಿ ಇದೇ ಬಡಾವಣೆಯ ನಿವಾಸಿಯೊಬ್ಬರು ಪಾಪಣ್ಣ ಅವರ ಮೇಲೆ ಅಟ್ರಾಸಿಟಿ ಕೇಸ್‌‍ (ಜಾತಿನಿಂದನೆ ಪ್ರಕರಣ) ನೀಡಿದ್ದರು. ವಿನಾಕಾರಣ ಸುಳ್ಳು ದೂರು ನೀಡಿ ಕಿರುಕುಳ ನೀಡುತ್ತಿದ್ದರಿಂದ
ಪಾಪಣ್ಣ ಅವರು ಮನನೊಂದಿದ್ದರು. ಈ ನಡುವೆ ಊರಿನ ಜಾತ್ರೆ ನಿಮಿತ್ತ ಪಾಪಣ್ಣ ಅವರು ಕುಟುಂಬದೊಂದಿಗೆ ಹೋಗಿದ್ದಾಗ ದೂರು ನೀಡಿದ್ದವರ ಜೊತೆ ಮತ್ತೆ ಜಗಳವಾಗಿದೆ.

ಆ ಸಂದರ್ಭದಲ್ಲಿ ನಯನ ಎಂಬ ಮಹಿಳೆ ಸುಳ್ಳು ಅಟ್ರಾಸಿಟಿ ಕೇಸ್‌‍ ದಾಖಲು ಮಾಡಿಸಿ 10 ಲಕ್ಷ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಪಾಪಣ್ಣ ಅವರು ಈ ಎಲ್ಲಾ ವಿಚಾರವನ್ನು ವಿಡಿಯೋ ಮಾಡಿಟ್ಟು ನನ್ನ ಕುಟುಂಬವನ್ನು ಹಾಗೂ ತಂಗಿಯನ್ನು ಕಾಪಾಡಿ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋದಲ್ಲಿರುವ ಮಾಹಿತಿಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ.

ದ್ವೇಷದಿಂದ ರಿಹ್ಯಾಬ್‌ ಸೆಂಟರ್‌ ಮಾಲೀಕನ ಕೊಲೆ : ಆರೋಪಿಗಳಿಗಾಗಿ ಶೋಧ
ಬೆಂಗಳೂರು,ಜೂ.20- ದ್ವೇಷದಿಂದ ಪುನರ್ವಸತಿ ಕೇಂದ್ರದ ಮಾಲೀಕನನ್ನು ಅವರ ಮಗ ಮತ್ತು ಚಾಲಕ ಇಲ್ಲದಿರುವ ಸಮಯವನ್ನೇ ಕಾದು ಸಂಚು ರೂಪಿಸಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಚಂದ್ರಾಲೇಔಟ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯ ಬಿಸಿಸಿ ಬಡಾವಣೆಯಲ್ಲಿರುವ ಕುಡಿತ ಬಿಡಿಸುವ ರಿಹ್ಯಾಬ್‌ ಸೆಂಟರ್‌ (ಪುನರ್ವಸತಿ ಕೇಂದ್ರ) ಮಾಲೀಕ ಶಿವಲಿಂಗಯ್ಯ (60) ಅವರನ್ನು ಕೊಲೆ ಮಾಡಲಾಗಿದೆ.

ಪರಾರಿಯಾಗಿರುವ ಆರೋಪಿಗಳಿಗಾಗಿ ಪಶ್ವಿಮವಿಭಾಗದ ಡಿಸಿಪಿ ಯತೀಶ್‌ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಮಾಹಿತಿಗಳನ್ನು ಕಲೆ ಹಾಕುತ್ತಿವೆ. ಪುನರ್ವಸತಿ ಕೇಂದ್ರದ ಮಾಲೀಕ ಶಿವಲಿಂಗಯ್ಯ ವಿನಾಕಾರಣ ತಮ ಮೇಲೆ ಹಲ್ಲೆ ನಡೆಸುತ್ತಾರೆ, ಬೈಯುತ್ತಾರೆಂದು ದ್ವೇಷ ಸಾಧಿಸುತ್ತಿದ್ದ ಎಂಟು ಮಂದಿ ಅವರ ಕೊಲೆಗೆ ಸಂಚು ರೂಪಿಸಿದ್ದಾರೆ.
ಅದರಂತೆ ನಿನ್ನೆ ಮಧ್ಯಾಹ್ನ ಅವರ ಮಗ ಹಾಗೂ ಕಾರು ಚಾಲಕ ಇಲ್ಲದಿರುವ ಸಮಯವನ್ನೇ ಕಾದಿದ್ದ ಆರೋಪಿಗಳು ಮಹಡಿಯ ರೂಮ್‌ನಲ್ಲಿ ಮಲಗಿದ್ದ ಶಿವಲಿಂಗಯ್ಯ ಮೇಲೆ ರಾಡುಗಳಿಂದ ಹಲ್ಲೆ ನಡೆಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಂತರ ಅವರ ಕಾರನ್ನು ತೆಗೆದುಕೊಂಡು ಒಂದು ಬ್ಯಾಗ್‌ ಸಮೇತ ಪರಾರಿಯಾಗಿದ್ದಾರೆ. ಆ ಬ್ಯಾಗ್‌ನಲ್ಲಿ ಏನನ್ನು ತುಂಬಿಕೊಂಡು ಹೋಗಿದ್ದಾರೆಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಆರೋಪಿಗಳು ತೆಗೆದುಕೊಂಡು ಹೋಗಿದ್ದ ಬೈಕ್‌ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ರಿಯಾಬ್‌ ಸೆಂಟರ್‌ ಮಾಲೀಕನನ್ನು ಕೊಲೆ ಮಾಡಿ ಪರಾರಿಯಾಗಿರು ಆರೋಪಿಗಳು ಈ ಹಿಂದೆಯೂ ಇಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು. ನಂತರ ಅವರ ಪೋಷಕರು ಮತ್ತೆ ಕರೆದುಕೊಂಡು ಬಂದು ಇಲ್ಲಿಗೆ ಬಿಟ್ಟಿದ್ದರು.

ಶಿವಲಿಂಗಯ್ಯ ಅವರು ಇವರನ್ನು ಹೊರಗೆ ಬಿಡುತ್ತಿರಲಿಲ್ಲ. ಬೈದು ಬುದ್ಧಿ ಹೇಳುತ್ತಿದ್ದರು. ಇದೇ ಕೋಪಕ್ಕೆ ಆರೋಪಿಗಳು ದ್ವೇಷ ಸಾಧಿಸಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಚಂದ್ರಾಲೇಔಟ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಪುನರ್ವಸತಿ ಕೇಂದ್ರದಲ್ಲಿದ್ದ ನಿತಿನ್‌, ಕಾರ್ತಿಕ್‌, ಸೋಯಲ್‌ ಪಾಷಾ ಸೇರಿದಂತೆ ಎಂಟು ಮಂದಿ ಕೃತ್ಯ ವೆಸಗಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಅವರುಗಳಿಗಾಗಿ ಶೋಧ ಕೈಗೊಂಡಿದ್ದಾರೆ.


ಗೃಹಿಣಿಯ 30 ಗ್ರಾಂ ಚಿನ್ನದ ಸರ ಅಪಹರಣ
ಬೆಂಗಳೂರು,ಜೂ.20- ಮನೆಗೆ ನಡೆದು ಹೋಗುತ್ತಿದ್ದ ಗೃಹಿಣಿಯೊಬ್ಬರ ಕೊರಳಿನಿಂದ 30 ಗ್ರಾಂ ಚಿನ್ನದ ಸರವನ್ನು ದರೋಡೆಕೋರರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾತ್ರಿ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ಧಾರ್ಥ ಶಾಲೆಯ ಹಿಂಭಾಗದ ಬಡಾವಣೆಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ನಿನ್ನೆ ಸಂಜೆ ಹೊರಗೆ ಹೋಗಿದ್ದರು.

ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಮನೆಗೆ ನಡೆದು ಬರುತ್ತಿದ್ದಾಗ ಹಿಂದಿನಿಂದ ಬಂದ ದರೋಡೆಕೋರನೊಬ್ಬ ಅವರ ಕೊರಳಿಗೆ ಕೈಹಾಕಿ ಸರ ಕಿತ್ತುಕೊಂಡಿದ್ದಾನೆ. ನಂತರ ಸ್ವಲ್ಪ ದೂರದಲ್ಲಿ ಚಾಲನೆಯಲ್ಲಿ ನಿಂತಿದ್ದ ಸ್ನೇಹಿತ ದರೋಡೆಕೋರನ ಬೈಕ್‌ ಹತ್ತಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆ ರಸ್ತೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದರೋಡೆಕೋರರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

RELATED ARTICLES

Latest News