ಚಿಕ್ಕಮಗಳೂರು,ಜೂ.20- ಕಾನೂನು ಉಲ್ಲಂಘಿಸಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹೊರ ವಲಯದ ವಾಜಪೇಯಿ ಲೇಔಟ್‌ನ ಸಾರ್ವಜನಿಕ ರಸ್ತೆಯಲ್ಲೇ ಮಹಮ್ಮದ್ ಸಮೀರ್ (20) ಎಂಬ ಯುವಕ ಹತ್ತಕ್ಕೂ ಹೆಚ್ಚು ಸ್ನೇಹಿತರೊಂದಿಗೆ ಕಾರಿನಲ್ಲಿ ರೌಡಿ ಸ್ಟೈಲ್‌ನಲ್ಲಿ ಬಂದು ಕಾರಿನ ಬಾನೆಟ್ ಮೇಲೆ 5 ಕೆಜಿ ಕೇಕ್ ಇಟ್ಟು, ಸುಮಾರು ಎರಡೂವರೆ ಅಡಿ ಉದ್ದದ ತಲ್ವಾರ್ ಬಳಸಿ ಕತ್ತರಿಸಿದ್ದಾನೆ.
ಈ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿ ಮಹಮದ್ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದರು.
ಕಾನೂನುಬಾಹಿರವಾಗಿ ಆಯುಧಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವವರನ್ನು ಕಟ್ಟುನಿಟ್ಟಾಗಿ ಆರೋಪಿಗಳೆಂದೇ ಪರಿಗಣಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
