ಚನೈ, ಮೇ 4- ಶಿಷ್ಟಾಚಾರಕ್ಕೆ ತಿಲಾಂಜಲಿ ಹಾಡಿ ರಾಜ್ಯದಲ್ಲಿ ಮತ್ತೆ ಎರಡನೇ ಬಾರಿಗೆ ಅಧಿಕಾರ ಹಿಡಿಯುತ್ತೇವೆ ಎಂಬ ಅತಿಯಾದ ಆತವಿಶ್ವಾಸದಲ್ಲಿದ್ದ ಡಿಎಂಕೆ ಸೋಲು ಕುಟುಂಬ ವ್ಯಾಮೋಹವೇ ಕಾರಣ ಎನ್ನಲಾಗುತ್ತಿದೆ.
ಜನಪರ ಯೋಜನೆಗಳ ಅನುಷ್ಠಾನದ ಹೊರತಾಗಿಯೂ ಡಿಎಂಕೆ ಇಷ್ಟು ಹೀನಾಯವಾಗಿ ಸೋಲುತ್ತದೆ ಎಂದು ಯಾವ ರಾಜಕೀಯ ಪಂಡಿತರೂ ಕೂಡ ಲೆಕ್ಕಾಚಾರ ಹಾಕಿರಲಿಲ್ಲ.ಇತ್ತೀಚೆಗೆ ಬಿಡುಗಡೆಯಾದ ಸಮೀಕ್ಷೆಗಳೂ ಕೂಡಾ ಡಿಎಂಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಭವಿಷ್ಯ ನುಡಿದಿದ್ದವು. ಆದರೆ ಪ್ರಕಟಗೊಂಡ ಫಲಿತಾಂಶದಲ್ಲಿ ಎಲ್ಲವೂ ತಿರುವುಮುರುವಾಗಿದೆ.
ಡಿಎಂಕೆ ಸೋಲಿಗೆ ಕಾರಣ ಹುಡುಕುತ್ತಾ ಹೋದರೆ ಅದಕ್ಕೆ ನೂರಾರು ನಿದರ್ಶನಗಳನ್ನು ನೀಡಬಹುದು ಎಂದು ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ.
ವಿಜಯ್ ಅವರ ಟಿವಿಕೆ ಪಕ್ಷದ ಸುನಾಮಿ :
ನಟ ವಿಜಯ್ ಅವರ ಟಿವಿಕೆ ಪಕ್ಷವು ಡಿಎಂಕೆಯ ಸಾಂಪ್ರದಾಯಿಕ ಯುವ ಮತದಾರರನ್ನು ಮತ್ತು ಹೊಸ ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದು ಡಿಎಂಕೆಯ ವೋಟ್ ಬ್ಯಾಂಕ್ ಅನ್ನು ಸುಮಾರು ಶೇ.15 ರಿಂದ ಶೇ.20 ರಷ್ಟು ಕಬಳಿಸಿದ್ದು, ಮೈತ್ರಿಕೂಟದ ಗೆಲುವಿನ ಅಂತರವನ್ನು ಕಡಿಮೆ ಮಾಡಿದೆ.
ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರದ ಆರೋಪ :
ಕಳೆದ ಐದು ವರ್ಷಗಳ ಆಡಳಿತದಲ್ಲಿ ಸಚಿವರ ಮೇಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಪ್ರತಿಪಕ್ಷಗಳು ಸರಿಯಾಗಿ ಬಳಸಿಕೊಂಡಿವೆ. ಅದರಲ್ಲೂ ಕಾನೂನು ಸುವ್ಯವಸ್ಥೆ ಮತ್ತು ಬೆಲೆ ಏರಿಕೆ ವಿಚಾರಗಳು ಸಾಮಾನ್ಯ ಜನರ ಅಸಮಾಧಾನಕ್ಕೆ ಕಾರಣವಾಗಿವೆ.
ಮೈತ್ರಿಕೂಟದ ಒಳಗಿನ ಬಿರುಕು :
ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಮತವು ಈ ಬಾರಿ ಬಹಿರಂಗವಾಗಿತ್ತು. ಕಾಂಗ್ರೆಸ್ ಹೆಚ್ಚಿನ ಸೀಟುಗಳಿಗೆ ಬೇಡಿಕೆ ಇಟ್ಟಿದ್ದರೂ ಡಿಎಂಕೆ ಕೇವಲ 25 ಸ್ಥಾನಗಳನ್ನು ನೀಡಿದ್ದು, ಇದು ಮೈತ್ರಿಕೂಟದ ಕಾರ್ಯಕರ್ತರ ನಡುವಿನ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಿದೆ.
ಕುಟುಂಬ ರಾಜಕಾರಣದ ಟೀಕೆ :
ಉದಯನಿಧಿ ಸ್ಟಾಲಿನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು ಮತ್ತು ಪಕ್ಷದಲ್ಲಿ ಕೇವಲ ಕುಟುಂಬದ ಸದಸ್ಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪವನ್ನು ವಿಜಯ್ ಮತ್ತು ಎಐಎಡಿಎಂಕೆ ಪ್ರಬಲವಾಗಿ ಪ್ರಚಾರ ಮಾಡಿದ್ದವು. ಇದು ತಟಸ್ಥ ಮತದಾರರನ್ನು ಪಕ್ಷದಿಂದ ದೂರ ಮಾಡಿದೆ.
ರೈತರ ಅಸಮಾಧಾನ :
ಕೃಷಿ ಉತ್ಪಾದನೆಯಲ್ಲಿನ ಇಳಿಕೆ (ವಿಶೇಷವಾಗಿ ಭತ್ತದ ಇಳುವರಿ) ಮತ್ತು ಡೆಲ್ಟಾ ಪ್ರದೇಶದ ರೈತರಿಗೆ ನೀಡಿದ ಭರವಸೆಗಳು ಈಡೇರದಿದ್ದಕ್ಕೆ ಗ್ರಾಮೀಣ ಭಾಗದ ಮತಗಳು ಈ ಬಾರಿ ಹಂಚಿಹೋಗಿವೆ.
