ತುಮಕೂರು,ಆ.9- ನೂತನವಾಗಿ ಸಚಿವರಾದ ಎಚ್.ಸಿ.ಬಾಲಕೃಷ್ಣ ಅವರು ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಬಳಿಕ ಶ್ರೀ ಶಿವಕುಮಾರ ಸ್ವಾಮೀಜಿಯವರ ದಿವ್ಯ ಜೀವನವನ್ನು ಸರಿಸಿದ ಅವರು, ಶ್ರೀಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ನೆನಪಿಸಿಕೊಂಡು ಭಕ್ತಿಪೂರ್ವಕ ನಮನ ಸಲ್ಲಿಸಿದರು.
ಬಳಿಕ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಶ್ರೀಗಳಿಂದ ಮಠದ ಸೇವಾ ಪರಂಪರೆ, ದಾಸೋಹದ ಮಹತ್ವ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ಮಾರ್ಗದರ್ಶನ ಪಡೆದರು. ಸಿದ್ಧಗಂಗಾ ಮಠವು ಶಿಕ್ಷಣ, ಅನ್ನದಾಸೋಹ ಹಾಗೂ ಸಮಾಜ ಸೇವೆಯ ಮೂಲಕ ರಾಜ್ಯದಾದ್ಯಂತ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಮಠದ ಸೇವಾ ಪರಂಪರೆ ಮತ್ತು ದಾಸೋಹಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಬಾಲಕೃಷ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮಠದ ಸೇವಾ ಪರಂಪರೆ, ದಾಸೋಹದ ಚಿಂತನೆ ಹಾಗೂ ಸಮಾಜಮುಖಿ ಕಾರ್ಯಗಳು ಸದಾ ತಮಂತಹ ಸಾರ್ವಜನಿಕ ಪ್ರತಿನಿಧಿಗಳಿಗೆ ಪ್ರೇರಣೆಯ ದಾರಿದೀಪವಾಗಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಶ್ರೀಮಠದ ಆದರ್ಶಗಳು ಮಾರ್ಗದರ್ಶಕವಾಗಿವೆ ಎಂದು ಅವರು ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವರನ್ನು ಮಠದ ವತಿಯಿಂದ ಆತೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರು ಪಾಲ್ಗೊಂಡಿದ್ದರು.
