Homeಅಂತಾರಾಷ್ಟ್ರೀಯಚೀನಾದಲ್ಲಿ ಟೈಫೂನ್‌ ಡಾಲ್ಫಿನ್‌ ಭೀತಿ: ಶಾಂಘೈನಲ್ಲಿ 1,300ಕ್ಕೂ ಹೆಚ್ಚು ವಿಮಾನಗಳ ರದ್ದು

ಚೀನಾದಲ್ಲಿ ಟೈಫೂನ್‌ ಡಾಲ್ಫಿನ್‌ ಭೀತಿ: ಶಾಂಘೈನಲ್ಲಿ 1,300ಕ್ಕೂ ಹೆಚ್ಚು ವಿಮಾನಗಳ ರದ್ದು

ಬೀಜಿಂಗ್‌‍, ಆ. 9- ಟೈಫೂನ್‌ ಡಾಲ್ಫಿನ್‌ ಚಂಡಮಾರುತದ ಭೀತಿ ಹಿನ್ನೆಲೆಯಲ್ಲಿ ಚೀನಾದ ಶಾಂಘೈ ನಗರದ ಎರಡು ವಿಮಾನ ನಿಲ್ದಾಣಗಳಿಂದ ಸಂಚರಿಸಬೇಕಿದ್ದ 1,300ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಚಂಡಮಾರುತದ ಪರಿಣಾಮ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಚಂಡಮಾರುತದ ಹೊರಭಾಗದ ಮಾರುತಗಳು ಶನಿವಾರ ಉತ್ತರ ತೈವಾನ್‌ಗೆ ಅಪ್ಪಳಿಸಿದ್ದು, ರಾಜಧಾನಿ ತೈಪೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ತೈವಾನ್‌ ವಿಮಾನಯಾನ ಸಂಸ್ಥೆಗಳು ಇಂದು ಚೀನಾಕ್ಕೆ ತೆರಳಬೇಕಿದ್ದ ವಿಮಾನಗಳನ್ನೂ ರದ್ದುಗೊಳಿಸಿವೆ.

ಬೆಳಗಿನ ವೇಳೆಗೆ ಟೈಫೂನ್‌ ಡಾಲ್ಫಿನ್‌ನ ಗರಿಷ್ಠ ನಿರಂತರ ಗಾಳಿಯ ವೇಗ ಗಂಟೆಗೆ ಸುಮಾರು 162 ಕಿಲೋಮೀಟರ್‌ಗಳಷ್ಟಿತ್ತು. ಚಂಡಮಾರುತದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ತೀವ್ರ ಪ್ರವಾಹ ಮತ್ತು ಭೂಕುಸಿತದ ಅಪಾಯ ಎದುರಾಗಿದೆ.ತಡರಾತ್ರಿ ಝೆಜಿಯಾಂಗ್‌ ಪ್ರಾಂತ್ಯ ಹಾಗೂ ನೆರೆಯ ಫುಜಿಯಾನ್‌ ಪ್ರಾಂತ್ಯದ ಉತ್ತರ ಭಾಗಗಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ.

ಚೀನಾದ ಹವಾಮಾನ ಮುನ್ಸೂಚನಾ ಸಂಸ್ಥೆಗಳ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ 200ರಿಂದ 400 ಮಿಲಿಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆಯಿದೆ. ಝೆಜಿಯಾಂಗ್‌ನಲ್ಲಿ ಭೂಕುಸಿತದ ತೀವ್ರ ಅಪಾಯದ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಝೆಜಿಯಾಂಗ್‌ನ ತೈಝೌ ನಗರದಲ್ಲಿ ಸುಮಾರು 3.9 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಶಾಂಘೈನಲ್ಲಿ ಅಪಾಯದ ಪ್ರದೇಶಗಳಲ್ಲಿದ್ದ 30 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಝೆಜಿಯಾಂಗ್‌ ಅಧಿಕಾರಿಗಳು ದೋಣಿ ಮತ್ತು ಕ್ರೂಸ್‌‍ ಸೇವೆಗಳು ಸೇರಿದಂತೆ ಎಲ್ಲ ಜಲಾಧಾರಿತ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ.

RELATED ARTICLES
spot_img

Latest News