ಬೆಂಗಳೂರು, ಮಾ.26- ಮತ್ತೆ ಕಾಲ್ತುಳಿತದಂತಹ ಪರಿಸ್ಥಿತಿ ಉದ್ಭವಿಸಿದರೆ ಏನು ಮಾಡಬೇಕು..? ಜನರ ರಕ್ಷಣೆ ಹೇಗೆ ಮಾಡಬೇಕು ಎಂಬ ಬಗ್ಗೆ ಇಂದು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್, ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸಮುಖದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ನೇತೃತ್ವದ ಡಿಫೆನ್‌್ಸ, ಫೈರ್ ಹಾಗೂ ಭದ್ರತಾ ಪೊಲೀಸರು ಸೇರಿದಂತೆ 500 ಕ್ಕೂ ಹೆಚ್ಚು ಮಂದಿ ಅಣಕು ಪ್ರದರ್ಶನ ನಡೆಸಿಕೊಟ್ಟರು.
ಮಾಕ್ ಡ್ರಿಲ್ ಹಿನ್ನೆಲೆಯಲ್ಲಿ ಸ್ಟೇಡಿಯಂ ಸುತ್ತಮುತ್ತ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಸ್ಥಳದಲ್ಲಿ ಆ್ಯಂಬುಲೆನ್‌್ಸ, ಫೈರ್ ಎಂಜಿನ್ ವಾಹನಗಳನ್ನು ನಿಲ್ಲಿಸಲಾಗಿತ್ತು. ಮೈದಾನದ ಒಳಗೆ ಹಾಗೂ ಹೊರಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೈದಾನದ ಪ್ರವೇಶದ್ವಾರಗಳಲ್ಲಿ ಜನಸಂದಣಿ ಹೆಚ್ಚಾದರೆ ಅದನ್ನು ಯಾವ ರೀತಿ ನಿಭಾಯಿಸಬೇಕು. ಕಾಲ್ತುಳಿತದಂತಹ ಪ್ರಕರಣಗಳು ಮರುಕಳಿಸದಂತೆ ಹೇಗೆ ಎಚ್ಚರವಹಿಸಬೇಕು ಎನ್ನುವ ಬಗ್ಗೆಯೂ ಅಣುಕು ಪ್ರದರ್ಶನ ನಡೆಸಲಾಯಿತು.
ಸಲಹೆ-ಸೂಚನೆಗಳು: ಕಳೆದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾದ ನಂತರ ಇದುವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳನ್ನು ಆಡಲು ಅವಕಾಶ ನೀಡಿರಲಿಲ್ಲ. ಆದರೆ, ಇದೀಗ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಆಡಿಸಲು ತೀರ್ಮಾನಿಸಿರುವುದರಿಂದ ಭಾರಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಾ.28 ರಂದು ನಡೆಯಲಿರುವ ಆರ್ಸಿಬಿ- ಸನ್ರೈಸರ್ರಸ ತಂಡಗಳ ನಡುವಿನ ಉದ್ಘಾಟನಾ ಪಂದ್ಯ ವೀಕ್ಷಿಸಲು ಆಗಮಿಸುವ ಪ್ರೇಕ್ಷಕರು ಈ ಬಾರಿ ಹೊಸ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು ಅನಿವಾರ್ಯವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.
ಟಿಕೆಟ್ಗಳ ಮೇಲೆ ಕ್ಯೂ ಆರ್ ಕೋಡ್ ಇರಲಿದೆ. ಪ್ರೇಕ್ಷಕರು ಪಂದ್ಯ ಆರಂಭವಾಗುವ ನಾಲ್ಕು ತಾಸು ಮೊದಲು ಹಾಜರಿರಬೇಕು. ಕ್ಯೂಆರ್ ಪರಿಶೀಲನೆಯ ನಂತರ ಹೋಲ್ಡಿಂಗ್ ಪ್ರದೇಶ ಪ್ರವೇಶಿಸಬೇಕು. ತಮ ಸ್ಟ್ಯಾಂಡ್ಗಳಿಗೆ ನಿರ್ದಿಷ್ಟ ಮಾರ್ಗದಲ್ಲಿ ಮಾತ್ರ ಸಂಚರಿಸಬೇಕು. ಯಾವುದೇ ಖಾಸಗಿ ವಾಹನ ತರಬಾರದು, ಟಿಕೆಟ್ ಇಲ್ಲದವರು ವಿನಾಕಾರಣ ಮೈದಾನದ ಹೊರ ಭಾಗದಲ್ಲಿ ಓಡಾಡಬಾರದು. ನಿಗದಿತ ಸ್ಥಳದಲ್ಲೇ ವಾಹನಗಳನ್ನು ಪಾರ್ಕ್ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
2 ಸಾವಿರ ಪೊಲೀಸರ ನಿಯೋಜನೆ
ಬೆಂಗಳೂರು, ಮಾ.26- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28 ರಂದು ನಡೆಯಲಿರುವ ಆರ್ಸಿಬಿ ಮತ್ತು ಸನ್ರೈಸರ್ರಸ ನಡುವಿನ ಪಂದ್ಯಾವಳಿಯ ಬಂದೋಬಸ್ತ್ಗಾಗಿ ಅಧಿಕಾರಿಗಳು ಸೇರಿದಂತೆ ಎರಡು ಸಾವಿರ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರತೆಗಾಗಿ 6 ಮಂದಿ ಡಿಸಿಪಿಗಳು, 15ಕ್ಕೂ ಹೆಚ್ಚು ಎಸಿಪಿಗಳು, ಎಚ್ಸಿ, ಪಿಸಿ ಮತ್ತು ಹೋಮ್ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಘಿಸಿದರೆ, ಅಂತಹವರ ಪ್ರವೇಶ ನಿರಾಕರಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಟಿಕೆಟ್ ಇದ್ದವರು ಮಾತ್ರ ಮೈದಾನಕ್ಕೆ ಬರಬೇಕು. ಈಗಾಗಲೇ ಎಲ್ಲ ರೀತಿಯ ಸೂಚನೆ ನೀಡಿದ್ದೇವೆ. ಇದರ ಜೊತೆಗೆ ನಾವು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಂಡಿರುವುದರಿಂದ ಈ ಬಾರಿ ಪಂದ್ಯ ಸುಸೂತ್ರವಾಗಿ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಹೋಲ್ಡಿಂಗ್ ಏರಿಯಾದ ಮೇಲೆ ಹೆಚ್ಚು ಗಮನಹರಿಸಿದ್ದೇವೆ. ಅಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಿಕೊಂಡಿದ್ದೇವೆ. ಎಕ್‌್ಸಪರ್ಟ್ ಕಮಿಟಿ ಸಲಹೆ ಪ್ರಕಾರ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ನಮ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಬಾರಿ 9 ಆ್ಯಂಬುಲೆನ್‌್ಸ ನಿಯೋಜನೆ ಮಾಡಿದ್ದೇವೆ. ಮೈದಾನದ ಒಳಗೆ ಐದು ಹಾಗೂ ಹೊರಗೆ ನಾಲ್ಕು ಆ್ಯಂಬುಲೆನ್‌್ಸಗಳನ್ನು ನಿಯೋಜನೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ: ಈ ಬಾರಿ ನಾವು ಜನದಟ್ಟಣೆ ನಿಯಂತ್ರಣ ಮಾಡಲು ಆದ್ಯತೆ ನೀಡಿದ್ದೇವೆ. ಟಿಕೆಟ್ ಇಲ್ಲದವರು ಮೈದಾನದ ಹೊರಗೆ ಸುತ್ತಾಡಲು ಅವಕಾಶ ನೀಡುವುದಿಲ್ಲ. ಪಂದ್ಯ ವೀಕ್ಷಿಸಲು ಆಗಮಿಸುವ ಪ್ರೇಕ್ಷಕರಿಗೆ ಉಚಿತ ಮೆಟ್ರೋ ಟಿಕೆಟ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯ ಮುಗಿದ ನಂತರವೂ ಮೆಟ್ರೋ ಸಂಚಾರ ಮಾಡುವುದರಿಂದ ಪ್ರೇಕ್ಷಕರು ಮೆಟ್ರೋ ಬಳಕೆ ಮಾಡುವ ಮೂಲಕ ವಾಹನ ದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳಲು ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿಕೊಂಡರು.
2 ವಿಭಾಗಗಳಲ್ಲಿ ಪೊಲೀಸರ ನಿಯೋಜನೆ: ಚಿನ್ನಸ್ವಾಮಿ ಮೈದಾನಕ್ಕೆ ನಾವು ಎಂ 1 ಹಾಗೂ ಎಂ 2 ವಿಭಾಗಗಳನ್ನಾಗಿ ವಿಂಗಡಿಸಿ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ. ಮೈದಾನದ ಒಳಭಾಗದಲ್ಲೂ ನಾವು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿದ್ದೇವೆ. 15 ರಿಂದ 21 ಸ್ಕ್ವಾಡ್ಗಳನ್ನು ಮಾಡಲಾಗಿದ್ದು ನಗರದ ಬಹುತೇಕ ಠಾಣೆಗಳ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಿಕೊಂಡಿದ್ದೇವೆ ಎಂದು ಸೀಮಂತ್ಕುಮಾರ್ ಸಿಂಗ್ ವಿವರಣೆ ನೀಡಿದರು.
