ನವದೆಹಲಿ, ಅ.14- ಸ್ಪರ್ಧಾತಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಪ್ರಕರಣಗಳಿಗೆ ಕೊನೆ ಹಾಡುವ ಉದ್ದೇಶದಿಂದ ಪರೀಕ್ಷೆ ನಡೆಯುವ ದಿನವೇ ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಪ್ರಶ್ನೆ ಪತ್ರಿಕೆ ತಯಾರಿಸುವ ಹೊಸ ಐಡಿಯಾ ನೀಡಲಾಗಿದೆ.ಇಂತಹ ವಿನೂತನ ಐಡಿಯಾ ನೀಡಿರುವುದು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು.
ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ತಡೆಯಲು ನಂದನ್ ನಿಲೇಕಣಿ ಅವರು ಎಐ ತಂತ್ರಜ್ಞಾನ ಆಧಾರಿತ ಹೊಸ ವಿಧಾನವನ್ನು ಪ್ರಸ್ತಾಪಿಸಿದ್ದಾರೆ.ಪರೀಕ್ಷೆಗೂ ಮುನ್ನ ಒಂದೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವ ಬದಲು, ಪರೀಕ್ಷೆಯ ದಿನವೇ ಕೃತಕ ಬುದ್ಧಿಮತ್ತೆ ನೆರವಿನಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಅವರ ಸಲಹೆಯಾಗಿದೆ.
ನವದೆಹಲಿಯಲ್ಲಿ ನಡೆದ ಬ್ಲೂಮ್ಬರ್ಗ್ ನ್ಯೂ ಎಕಾನಮಿ ಫೋರಂನಲ್ಲಿ ಮಾತನಾಡಿದ ನಿಲೇಕಣಿ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವನ್ನು ವಿವರಿಸಿದ್ದಾರೆ. ಪರೀಕ್ಷಾ ಸುಧಾರಣೆಗಳ ಕುರಿತು ಕೇಂದ್ರದ ಉನ್ನತ ಮಟ್ಟದ ಕಾರ್ಯಪಡೆಯ ನೇತೃತ್ವ ವಹಿಸಿರುವ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಹೊಸ ತಂತ್ರಜ್ಞಾನ ಬಳಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪರೀಕ್ಷಾ ಅಧಿಕಾರಿಗಳು ವಿವಿಧ ವಿಷಯಗಳ ಪ್ರಶ್ನೆಗಳ ಬೃಹತ್ ಸಂಗ್ರಹವನ್ನು ಸಿದ್ಧಪಡಿಸಬೇಕು. ಪರೀಕ್ಷೆ ಆರಂಭವಾಗುವ ಸ್ವಲ್ಪ ಸಮಯದ ಮೊದಲು ಆ ಸಂಗ್ರಹದಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಿ ಹೊಸ ಪ್ರಶ್ನೆ ಪತ್ರಿಕೆ ರೂಪಿಸಬಹುದು. ಈ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವೂ ನೆರವಾಗಬಹುದು.ಈ ವಿಧಾನದಿಂದ ಮುಂಚಿತವಾಗಿ ಒಂದೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಮುದ್ರಿಸಿ ವಿತರಿಸುವ ಅಗತ್ಯ ಕಡಿಮೆಯಾಗಬಹುದು. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಗೆ ಇರುವ ಅವಕಾಶಗಳನ್ನು ನಿಯಂತ್ರಿಸಬಹುದು ಎಂಬುದು ಅವರ ಪ್ರಸ್ತಾವನೆಯ ಹಿಂದಿನ ಉದ್ದೇಶವಾಗಿದೆ.
ಪರೀಕ್ಷೆಯ ದಿನದವರೆಗೂ ಅಂತಿಮ ಪ್ರಶ್ನೆ ಪತ್ರಿಕೆ ಸಿದ್ಧವಾಗದಂತೆ ವ್ಯವಸ್ಥೆ ರೂಪಿಸಿದರೆ, ಅದನ್ನು ಮುಂಚಿತವಾಗಿ ಕದಿಯುವುದು ಅಥವಾ ಅಭ್ಯರ್ಥಿಗಳಿಗೆ ಮಾರಾಟ ಮಾಡುವುದು ಕಷ್ಟವಾಗಬಹುದು ಎಂಬುದು ಈ ಪ್ರಸ್ತಾವನೆಯ ಆಶಯವಾಗಿದೆ.
