Thursday, May 14, 2026
Homeರಾಜ್ಯಪ್ರಧಾನಿ ಭೇಟಿ ವೇಳೆ ಜಿಲೆಟಿನ್‌ ಕಡ್ಡಿ ಪತ್ತೆ ಪ್ರಕರಣದಲ್ಲಿ ಎನ್‌ಐಎ ಎಂಟ್ರಿ

ಪ್ರಧಾನಿ ಭೇಟಿ ವೇಳೆ ಜಿಲೆಟಿನ್‌ ಕಡ್ಡಿ ಪತ್ತೆ ಪ್ರಕರಣದಲ್ಲಿ ಎನ್‌ಐಎ ಎಂಟ್ರಿ

NIA enters into gelatin stick case during PM's visit

ಬೆಂಗಳೂರು,ಮೇ 11- ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸಿದ ವೇಳೆ ಜಿಲೆಟಿನ್‌ ಕಡ್ಡಿಗಳು ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರವೇಶ ಮಾಡಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದ ತಾತಗುಣಿ ಬಳಿ ಇರುವ ಒಡೆಯರಹಳ್ಳಿ ಗೇಟ್‌ ಬಳಿ ಎರಡು ಜಿಲೆಟಿನ್‌ ಕಡ್ಡಿ ಹಾಗೂ ಬೆಂಕಿಪೊಟ್ಟಣ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಇದು ವ್ಯಾಪಕ ಸುದ್ದಿಯಾಗಿದ್ದು ಜಿಲೆಟಿನ್‌ ಕಡ್ಡಿ ಪತ್ತೆಯಾದ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೈಗೆತ್ತಿಕೊಂಡಿದೆ. ಈಗಾಗಲೇ ಒಂದು ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌‍ಪಿ ಶ್ರೀನಿವಾಸಗೌಡ ಅವರಿಂದ ಮಾಹಿತಿ ಪಡೆದಿದ್ದಾರೆ.

ರಾಜ್ಯ ಗುಪ್ತದಳ ಮತ್ತು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅವರು ಭೇಟಿ ಕೊಟ್ಟು ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯು ಉದ್ದೇಶಪೂರ್ವಕವಾಗಿ ನಡೆದಿದೆಯೋ ಇಲ್ಲವೇ ಆಕಸಿಕವಾಗಿ ನಡೆದಿದೆಯೋ ಎಂಬುದರ ಕುರಿತು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಮೂಲಗಳ ಪ್ರಕಾರ, ಎನ್‌ಐಎಗೆ ಎನ್‌ಎಸ್‌‍ಜಿ ಹಾಗೂ ಆರ್‌ಎಡಬ್ಲ್ಯೂ ಅಧಿಕಾರಿಗಳೂ ಕೂಡಾ ಸ್ಥಳಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎನ್‌ಐಎ, ಎನ್‌ಎಸ್‌‍ಜಿ, ಆರ್‌ಎಡಬ್ಲ್ಯೂ, ಬೆಂಗಳೂರು ನಗರ ಹಾಗೂ ರಾಮನಗರ ಪೊಲೀಸರು ತನಿಖೆಗೆ ಕೈಜೋಡಿಸಿದ್ದಾರೆ.

ಪ್ರಧಾನಿಯವರ ಭದ್ರತೆಗೆ ಸವಾಲು ಹಾಕುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆಯೋ ಅಥವಾ ಇದರ ಹಿಂದೆ ಯಾವುದಾದರೂ ಉಗ್ರಗಾಮಿ ಸಂಘಟನೆಗಳ ಕೈವಾಡವಿದೆಯೋ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.ಸ್ಫೋಟಕದ ಮಾದರಿಯನ್ನು ವಿಶ್ಲೇಷಿಸಿ ಅದನ್ನು ತಯಾರಿಸಲು ಬಳಸಲಾದ ಸ್ಫೋಟಕ ವಸ್ತುಗಳ ಮೂಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಪ್ರಧಾನಿಯವರಂತಹ ಗಣ್ಯವ್ಯಕ್ತಿಗಳು ನಗರಕ್ಕೆ ಭೇಟಿ ಕೊಡುವ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರು, ಗುಪ್ತಚರ ವಿಭಾಗದ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ನಗರ ಪೊಲೀಸ್‌‍ ಆಯುಕ್ತರಿಗೆ ಒಂದು ವಾರ ಮುಂಚಿತವಾಗಿಯೇ ಮಾಹಿತಿಯನ್ನು ನೀಡಲಾಗುತ್ತದೆ. ಪ್ರಧಾನಿಯವರು ಯಾವ ಸ್ಥಳದಿಂದ ಯಾವ ಸಮಯದಲ್ಲಿ ಹೊರಡುತ್ತಾರೆ, ಎಷ್ಟು ಹೊತ್ತಿಗೆ ಬರುತ್ತಾರೆ, ತೆರಳುವ ಮಾರ್ಗಗಳು, ಹೊರಡುವ ಸಮಯ, ವೇದಿಕೆ ಮೇಲೆ ಎಷ್ಟು ಜನರಿರಬೇಕು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ಅವರಿಗೆ ಭದ್ರತೆ ಒದಗಿಸುವ ಎಸ್‌‍ಪಿಜಿಗೆ ಮಾಹಿತಿ ನೀಡಬೇಕು.

ಮೋದಿಯವರು ಬೆಂಗಳೂರಿಗೆ ಬರುವುದು ಒಂದು ವಾರ ಮುಂಚಿತವಾಗಿಯೇ ಗೊತ್ತಿತ್ತು. ದೆಹಲಿಯಿಂದ ಹೊರಟು 9.35 ಕ್ಕೆ ಎಚ್‌ಎಎಲ್‌ ವಿಮಾನನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ 10.05 ಕ್ಕೆ ಅಲ್ಲಿಂದ ತೆರಳಿ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ ಮಂದಿರಕ್ಕೆ ಆಗಮನ ಎಂಬುದು ಅವರ ಪ್ರವಾಸದ ಪಟ್ಟಿಯಲ್ಲೇ ಇತ್ತು.

ಇಷ್ಟೆಲ್ಲಾ ಮಾಹಿತಿ ಇದ್ದರೂ ಅತ್ಯಂತ ಬಿಗಿ ಭದ್ರತೆ ಇರುವ ಸ್ಥಳದಲ್ಲೇ ಭದ್ರತಾ ಲೋಪ ಉಂಟಾಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.ಸಾಮಾನ್ಯವಾಗಿ ಈ ಹಿಂದೆ ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಮೋದಿಯವರು ಅನೇಕ ಬಾರಿ ಬಂದಿದ್ದರು. ಆ ಸಂದರ್ಭದಲ್ಲಿ ಎಂದಿಗೂ ಇಂತಹ ಭದ್ರತಾ ವೈಫಲ್ಯ ಉಂಟಾಗಿರಲಿಲ್ಲ.

RELATED ARTICLES

Latest News