ಬೆಂಗಳೂರು, ಜೂ.21- ವಾರ್ಡ್ ಸಂಖ್ಯೆ 110 ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ನಡೆದ ಕಳಪೆ ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದಡಿ ಸಹಾಯಕ ಅಭಿಯಂತರ ಪೂಜಾರಪ್ಪ ಅವರನ್ನು ಅಮಾನತುಗೊಳಿಸಿದ್ದು, ಕಾಮಗಾರಿ ನಿರ್ವಹಿಸಿದ ಗುತ್ತಿಗೆ ಕಂಪನಿಯನ್ನು ಬ್ಲಾಕ್‌ಲಿಸ್ಟ್ ಮಾಡಲು ಆದೇಶಿಸಲಾಗಿದೆ.
ಇನ್ಫ್ರಾಸ್ಟ್ರಕ್ಚರ್ ಪ್ರೋಗ್ರಾಂ ಅಡಿಯಲ್ಲಿ ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ನಡೆದ ಆಸ್ಫಾಲ್ಟಿಂಗ್ ಕಾಮಗಾರಿಯನ್ನು ಸಚಿವರು ಸ್ಥಳದಲ್ಲೇ ಪರಿಶೀಲಿಸಿದ ವೇಳೆ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಆಯುಕ್ತರಿಗೆ ತಕ್ಷಣ ತಾಂತ್ರಿಕ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿತ್ತು. ಪರಿಶೀಲನೆಯಲ್ಲಿ ಕ್ರಿಯಾ ಯೋಜನೆಯ ಪ್ರಕಾರ, ನಿಗದಿತ ಪ್ರಮಾಣ ಮತ್ತು ದಪ್ಪದಲ್ಲಿ ಡಾಂಬರೀಕರಣ ಮಾಡದೆ ಕಡಿಮೆ ಪ್ರಮಾಣದಲ್ಲಿ ಕಾಮಗಾರಿ ನಡೆಸಿರುವುದು ದೃಢಪಟ್ಟಿದೆ. ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕರ್ತವ್ಯ ಲೋಪ ಎಸಗಿರುವ ಕಾರಣಕ್ಕೆ ಸಹಾಯಕ ಅಭಿಯಂತರ ಪೂಜಾರಪ್ಪ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ, 1957ರ ಸಿಸಿಎ ನಿಯಮ 10ರಡಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಜೊತೆಗೆ ಸಂಬಂಧಿತ ಗುತ್ತಿಗೆ ಕಂಪನಿಯನ್ನು ಬ್ಲಾಕ್‌ಲಿಸ್ಟ್ ಮಾಡಿ ದಂಡ ವಿಧಿಸಲಾಗಿದೆ. ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ, ಇಂತಹ ಕ್ರಮಗಳನ್ನು ಆಗಾಗ್ಗೆ ಕೈಗೊಳ್ಳಬೇಕಾದ ಪರಿಸ್ಥಿತಿ ಬರಬಾರದು ಎಂದು ಆಶಿಸುತ್ತೇನೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲಿದೆ. ಸಾರ್ವಜನಿಕ ಹಣದಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಕೆ ನೀಡಿದರು.
