Homeರಾಷ್ಟ್ರೀಯದೇಶ ವಿಭಜನೆಯ ಕರಾಳ ದಿನ, ಹುತಾತ್ಮರನ್ನು ಸ್ಮರಿಸಿದ ಪ್ರಧಾನಿ ಮೋದಿ

ದೇಶ ವಿಭಜನೆಯ ಕರಾಳ ದಿನ, ಹುತಾತ್ಮರನ್ನು ಸ್ಮರಿಸಿದ ಪ್ರಧಾನಿ ಮೋದಿ

PM Modi remembers martyrs on dark day of Partition

ನವದೆಹಲಿ, ಆ.14- 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರ ತ್ಯಾಗ ಮತ್ತು ಧೈರ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಶುಕ್ರವಾರದಂದು ಈ ಕುರಿತು ಪ್ರಧಾನಿ ಸಂದೇಶ ಹಂಚಿಕೊಂಡಿದ್ದಾರೆ.

ದೇಶ ವಿಭಜನೆಯ ತೀವ್ರ ಗಲಭೆಗಳು ಹಾಗೂ ಸಾಮೂಹಿಕ ವಲಸೆಯ ಪರಿಣಾಮವಾಗಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ, ಮೋದಿ ಸರ್ಕಾರವು 2021ರಿಂದ ಆ.14 ಅನ್ನು ಅಧಿಕೃತವಾಗಿ ವಿಭಜನೆಯ ಭೀಕರತೆಯ ಸ್ಮರಣಾ ದಿನ ಎಂದು ಆಚರಿಸಿಕೊಂಡು ಬರುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಇಂದು ನಾವು ವಿಭಜನೆಯ ಭೀಕರತೆಯ ಸ್ಮರಣಾ ದಿನವನ್ನು ಆಚರಿಸುತ್ತಿದ್ದೇವೆ. ಈ ದುರ್ಘಟನೆಯಿಂದ ಬಾಧಿತರಾದ ಪ್ರತಿಯೊಬ್ಬರ ಧೈರ್ಯವನ್ನು ನಾವು ಸ್ಮರಿಸುತ್ತೇವೆ. ಇದು ಇತಿಹಾಸದ ಅಂತಹ ಒಂದು ಕಪ್ಪು ಅಧ್ಯಾಯವಾಗಿದ್ದು, ಅನೇಕ ಜೀವಗಳನ್ನು ಛಿದ್ರಗೊಳಿಸಿತು. ಕುಟುಂಬಗಳು ಬೇರುಸಹಿತ ಕಿತ್ತೊಗೆಯಲ್ಪಟ್ಟವು, ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಕಾಯಿತು ಮತ್ತು ಅಪಾರ ನೋವು-ಸಂಕಟಗಳನ್ನು ಅನುಭವಿಸಬೇಕಾಯಿತು ಎಂದು ತಿಳಿಸಿದ್ದಾರೆ.

ಕಷ್ಟದ ದಿನಗಳಲ್ಲೂ ಸಹ ಜನರು ಎದೆಗುಂದದೆ, ಶೂನ್ಯದಿಂದ ತಮ್ಮ ಜೀವನವನ್ನು ಮರುರೂಪಿಸಿಕೊಂಡರು. ಪ್ರತಿಕೂಲ ಪರಿಸ್ಥಿತಿಯನ್ನೂ ತಮ್ಮ ಸಾಧನೆಯನ್ನಾಗಿ ಪರಿವರ್ತಿಸಿಕೊಂಡು ದೇಶದ ಪ್ರಗತಿಗೆ ಭರ್ಜರಿ ಕೊಡುಗೆ ನೀಡಿದರು ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಅಂತಹವರ ಜೀವನ ಶೈಲಿಯು ಮಾನವ ಸಂಕಲ್ಪಶಕ್ತಿಯ ಬಲವನ್ನು ಎಲ್ಲರಿಗೂ ಸದಾ ನೆನಪಿಸುತ್ತದೆ ಎಂದಿದ್ದಾರೆ.

ಮುಂದುವರಿದು, ಈ ದಿನವು ನಮ್ಮ ದೇಶದಲ್ಲಿ ಸಾಮರಸ್ಯ ಮತ್ತು ಸಹೋದರತ್ವವನ್ನು ಎಂದೆಂದಿಗೂ ಕಾಪಾಡಿಕೊಳ್ಳುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಮುಂಬರುವ ವಿಕಸಿತ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಅವರು ಕರೆ ನೀಡಿದ್ದಾರೆ. ಸದ್ಭಾವನೆ ಹಾಗೂ ಏಕತೆಯ ರಾಷ್ಟ್ರೀಯ ಮನೋಭಾವವನ್ನು ಮತ್ತಷ್ಟು ಬಲಪಡಿಸೋಣ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದ್ದಾರೆ.

ಭಾರತವು ಶನಿವಾರ ವಿಜೃಂಭಣೆಯಿಂದ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳಲು ಸಜ್ಜಾಗಿದೆ.

ಇತಿಹಾಸದ ಕರಾಳ ಅಧ್ಯಾಯ:
1947ರ ಆಗಸ್ಟ್‌ನಲ್ಲಿ ಬ್ರಿಟಿಷ್‌ ಭಾರತವು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜನೆಯಾಯಿತು. ಗಡಿ ರೇಖೆಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಬ್ರಿಟಿಷ್‌ ನ್ಯಾಯವಾದಿ ಸಿರಿಲ್‌ ರಾಡ್‌ಕ್ಲಿಫ್‌ ಅವರಿಗೆ ವಹಿಸಲಾಗಿತ್ತು. ಆದರೆ ಗಡಿ ನಿರ್ಧಾರಕ್ಕೆ ಅತ್ಯಂತ ಕಡಿಮೆ ಕಾಲಾವಕಾಶ ನೀಡಲಾಗಿತ್ತು. ಅಂತಿಮ ಗಡಿರೇಖೆಗಳು ಆಗಸ್ಟ್‌ 17ರಂದು ಸಾರ್ವಜನಿಕಗೊಂಡವು. ಅಂದರೆ, ಸ್ವಾತಂತ್ರ್ಯೋತ್ಸವದ ದಿನವೇ ಅನೇಕ ಜನರಿಗೆ ತಾವು ಯಾವ ದೇಶದ ಭಾಗವಾಗಲಿದ್ದೇವೆ ಎಂಬುದು ಸ್ಪಷ್ಟವಾಗಿರಲಿಲ್ಲ.

ವಿಭಜನೆಯ ಪರಿಣಾಮವಾಗಿ ಪಂಜಾಬ್‌ ಮತ್ತು ಬಂಗಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಸಾಮುದಾಯಿಕ ಧಾರ್ಮಿಕ ಹಿಂಸಾಚಾರ ನಡೆಯಿತು. ಹಿಂದೂ, ಮುಸ್ಲಿಂ ಮತ್ತು ಸಿಖ್‌ ಸಮುದಾಯಗಳ ಲಕ್ಷಾಂತರ ಜನರು ತಮ್ಮ ಪೂರ್ವಜರ ಮನೆ, ಜಮೀನು, ವ್ಯಾಪಾರ ಮತ್ತು ಆಸ್ತಿಪಾಸ್ತಿಗಳನ್ನು ತೊರೆದು ಹೊಸ ಗಡಿಗಳಾಚೆಗೆ ತೆರಳಬೇಕಾಯಿತು.

ಇತಿಹಾಸಕಾರರು ಮತ್ತು ವಿವಿಧ ಅಧ್ಯಯನಗಳು ವಿಭಜನೆಯ ಸಂದರ್ಭದಲ್ಲಿ ಸ್ಥಳಾಂತರಗೊಂಡವರ ಜನರ ಸಂಖ್ಯೆಯನ್ನು ಸುಮಾರು 1.4 ಕೋಟಿಯಿಂದ 1.5 ಕೋಟಿಗೂ ಹೆಚ್ಚು ಎಂದು ಅಂದಾಜಿಸಿವೆ. ಸಾವಿನ ಸಂಖ್ಯೆಯ ಬಗ್ಗೆ ಏಕಮತವಿಲ್ಲ; ವಿವಿಧ ಅಧ್ಯಯನಗಳಲ್ಲಿ ಕೆಲವು ಲಕ್ಷಗಳಿಂದ ಸುಮಾರು 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಅಂದಾಜುಗಳೂ ಕಂಡುಬರುತ್ತವೆ. ಈ ವ್ಯತ್ಯಾಸಕ್ಕೆ ಆ ಕಾಲದ ಅಪೂರ್ಣ ದಾಖಲೆಗಳು ಮತ್ತು ವ್ಯಾಪಕವಾಗಿ ನಡೆದ ಹಿಂಸಾಚಾರ ಪ್ರಮುಖ ಕಾರಣಗಳಾಗಿವೆ.

ವಿಶೇಷವಾಗಿ ಪಂಜಾಬ್‌ನಲ್ಲಿ ರೈಲುಗಳು, ನಿರಾಶ್ರಿತರ ದಂಡುಗಳು ಮತ್ತು ಗಡಿಭಾಗದ ಗ್ರಾಮಗಳು ಹಿಂಸಾಚಾರದ ಕೇಂದ್ರಗಳಾದವು. ಲಕ್ಷಾಂತರ ಮಂದಿ ಕಾಲ್ನಡಿಗೆಯಲ್ಲಿ, ಎತ್ತಿನಗಾಡಿಗಳಲ್ಲಿ, ರೈಲುಗಳಲ್ಲಿ ಹಾಗೂ ಇತರ ಮಾರ್ಗಗಳಲ್ಲಿ ಸುರಕ್ಷಿತ ಪ್ರದೇಶಗಳತ್ತ ತೆರಳಿದರು. ಕೆಲವರು ಕುಟುಂಬ ಸದಸ್ಯರನ್ನು ಕಳೆದುಕೊಂಡರೆ, ಇನ್ನೂ ಕೆಲವರು ಜೀವನಪೂರ್ತಿ ತಮ್ಮ ಹುಟ್ಟೂರಿಗೆ ಮರಳಲಾಗದ ನೋವನ್ನು ಹೊತ್ತುಕೊಂಡರು.

ಮನೆ ಕಳೆದುಕೊಂಡವರೇ ಹೊಸ ಭಾರತದ ನಿರ್ಮಾತೃಗಳು:
ವಿಭಜನೆಯ ನಂತರ ಭಾರತಕ್ಕೆ ಬಂದ ನಿರಾಶ್ರಿತರು ಕೇವಲ ಪರಿಹಾರದ ನಿರೀಕ್ಷೆಯಲ್ಲಿ ನಿಂತ ಜನರಾಗಿ ಉಳಿಯಲಿಲ್ಲ. ದೆಹಲಿ, ಪಂಜಾಬ್‌, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಭಾಗಗಳಲ್ಲಿ ಅವರು ಹೊಸ ಜೀವನವನ್ನು ಕಟ್ಟಿಕೊಂಡರು. ವ್ಯಾಪಾರ, ಕೈಗಾರಿಕೆ, ಶಿಕ್ಷಣ, ಕೃಷಿ ಮತ್ತು ವಿವಿಧ ವೃತ್ತಿಗಳಲ್ಲಿ ತಮ್ಮ ಛಾಪು ಮೂಡಿಸಿದರು.

ಅದೇ ರೀತಿ ಪಾಕಿಸ್ತಾನಕ್ಕೆ ತೆರಳಿದವರೂ ತಮ್ಮ ಬದುಕನ್ನು ಮರುನಿರ್ಮಿಸಿಕೊಂಡರು. ಹೀಗಾಗಿ ವಿಭಜನೆಯ ಇತಿಹಾಸವು ಕೇವಲ ರಕ್ತಪಾತದ ಕಥೆಯಲ್ಲ, ಅಪಾರ ನಷ್ಟದ ನಂತರವೂ ಮಾನವ ಸಮಾಜ ಹೇಗೆ ಬದುಕನ್ನು ಪುನಃ ಕಟ್ಟಿಕೊಳ್ಳಬಲ್ಲದು ಎಂಬುದರ ಕಥೆಯೂ ಆಗಿದೆ.

ಪ್ರಧಾನಿ ಮೋದಿ ಇದೇ ಮಾನವೀಯ ಶಕ್ತಿಯನ್ನು ಉಲ್ಲೇಖಿಸಿ, ವಿಭಜನೆಯಿಂದ ಬಾಧಿತರಾದವರ ಬದುಕು ಮಾನವ ಸಂಕಲ್ಪಶಕ್ತಿಯ ಬಲವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.

RELATED ARTICLES
spot_img

Latest News