ಬೆಂಗಳೂರು,ಜು.26- ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಅಧಿಕೃತವಾಗಿ ಭೇಟಿ ನೀಡಲಿದ್ದು, ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ ಲೋಕಾರ್ಪಣೆಗೊಳಿಸಲಿದ್ದಾರೆ. ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು, ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ತಲುಪಲಿದ್ದಾರೆ.
ಮೈಸೂರು ರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ನಿರ್ಮಾಣವಾಗಿರುವ ವಿವೇಕ ಸ್ಮಾರಕವನ್ನು ಪ್ರಧಾನಿಯವರು ಅಧಿಕೃತವಾಗಿ ಉದ್ಘಾಟಿಸಿ, ಸ್ವಾಮೀಜಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ರಾಮಕೃಷ್ಣ ವಿದ್ಯಾವಿಹಾರದ (ವಿದ್ಯಾಶಾಲೆಯ) ಮುಕ್ತ ಮೈದಾನದಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಗತಮಾನಂದಜಿ ಮಹಾರಾಜ್ ಸೇರಿದಂತೆ ಹಲವು ಗಣ್ಯರು, ಮಠಾಧೀಶರು ಹಾಗೂ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ಸ್ವಾಗತಕ್ಕಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರಾಮಕೃಷ್ಣ ಆಶ್ರಮದ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸ್ವಾಮಿ ವಿವೇಕಾನಂದರ ಜೀವನ, ಆದರ್ಶಗಳು ಹಾಗೂ ಮೈಸೂರು ರಾಜವಂಶದೊಂದಿಗೆ ಅವರಿದ್ದ ಐತಿಹಾಸಿಕ ನಂಟನ್ನು ಚಿರಸರಣೀಯವಾಗಿಸುವ ನಿಟ್ಟಿನಲ್ಲಿ ವಿವೇಕ ಸಾರಕ ರೂಪುಗೊಂಡಿದೆ. 1892ರಲ್ಲಿ ತಮ ದೇಶ ಸಂಚಾರದ (ಪರಿವ್ರಾಜಕ) ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದರು ಇಲ್ಲಿನ ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾದ ಶೇಷಾದ್ರಿ ಅಯ್ಯರ್ ಅವರೊಂದಿಗೆ ಗಾಢವಾದ ಒಡನಾಟವನ್ನು ಹೊಂದಿದ್ದರು. ವಿವೇಕಾನಂದರು ಚಿಕಾಗೋ ವಿಶ್ವ ಧರ್ಮ ಸಮೇಳನಕ್ಕೆ ತೆರಳಲು ಮೈಸೂರು ರಾಜಮನೆತನದ ಬೆಂಬಲವೂ ಪ್ರಮುಖ ಕಾರಣವಾಗಿತ್ತು.
ಸ್ವಾಮೀಜಿ ತಂಗಿದ್ದ ಐತಿಹಾಸಿಕ ಸ್ಥಳದಲ್ಲೇ ಈಗ ಈ ನೂತನ ವಿವೇಕ ಸಾರಕ ನಿರ್ಮಾಣಗೊಂಡಿದ್ದು, ಇದು ಯುವಜನತೆಯಲ್ಲಿ ದೇಶಭಕ್ತಿ, ಆಧ್ಯಾತಿಕತೆ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಪ್ರಮುಖ ಕೇಂದ್ರವಾಗಲಿದೆ. ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಮೈಸೂರು ನಗರಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಎಸ್‌ಪಿಜಿ ಪಡೆಗಳ ಮಾರ್ಗದರ್ಶನದಲ್ಲಿ ವಿಮಾನ ನಿಲ್ದಾಣ, ಓವಲ್ ಮೈದಾನ, ವಿವೇಕ ಸಾರಕ ಹಾಗೂ ರಾಮಕೃಷ್ಣ ಆಶ್ರಮದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಮತ್ತು ಸಂಚಾರ ದಟ್ಟಣೆಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತವು ಅಚ್ಚುಕಟ್ಟಾದ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
