ಚಂಡೀಗಢ,ಸೆ.3-ಪಂಜಾಬ್ನಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಕರಡು ಮತದಾರರ ಪಟ್ಟಿಯಲ್ಲಿ ಬಿಜೆಪಿ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ಸ್ಥಳಾಂತರಗೊಂಡ ಅಥವಾ ಬದಲಾಯಿಸಲಾದ ಮತದಾರರೆಂದು ಗುರುತಿಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯು ಆಡಳಿತರೂಢ ಆಮ್ ಆದಿ ಪಕ್ಷ (ಎಎಪಿ) ಮತ್ತು ಇತ್ತೀಚೆಗೆ ಬಿಜೆಪಿ ಸೇರಿರುವ ರಾಘವ್ ಚಡ್ಡಾ ನಡುವೆ ನೇರ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.
ಪಂಜಾಬ್ನ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ರಾಜಕೀಯ ಸೇಡಿನ ರಾಜಕಾರಣ ಮಾಡುತ್ತಿದ್ದು, ಉದ್ದೇಶಪೂರ್ವಕವಾಗಿ ತನ್ನ ಹೆಸರನ್ನು ಕರಡು ಪಟ್ಟಿಯಲ್ಲಿ ತಪ್ಪಾಗಿ ವರ್ಗೀಕರಿಸಿದೆ ಎಂದು ಚಡ್ಡಾ ಗಂಭೀರವಾಗಿ ದೂರಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಎಸ್ಐಆರ್ ಮಾರ್ಗಸೂಚಿಗಳ ಪ್ಯಾರಾಗ್ರಾಫ್ 4(ಡಿ) ಪ್ರಕಾರ ಸಂಸದರು ಮತ್ತು ಶಾಸಕರಂತಹ ಜನಪ್ರತಿನಿಧಿಗಳು ಸಂರಕ್ಷಿತ ಪಟ್ಟಿಯ ಅಡಿಯಲ್ಲಿ ಬರುತ್ತಾರೆ. ತಮ ವಿಷಯದಲ್ಲಿ ಈ ನಿಯಮವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಅವರು ವಾದಿಸಿದ್ದಾರೆ.
ಏನಾಗಿದೆ?
ಆಗಸ್ಟ್ 13ರಂದು ಪ್ರಕಟವಾದ ಪಂಜಾಬ್ನ ಖ ಕರಡು ಮತದಾರರ ಪಟ್ಟಿಯಲ್ಲಿ ಚಡ್ಡಾ ಅವರ ಹೆಸರು ಸಾಮಾನ್ಯ ಮತದಾರರ ಪಟ್ಟಿಯಲ್ಲಿ ಕಾಣಿಸದೆ, ASDD— Absent/Shifted/Dead/Duplicate ವರ್ಗದಡಿ ‘Permanently Shifted’ ಎಂದು ನಮೂದಿಸಲಾಗಿದೆ. ಚಡ್ಡಾ ಅವರ ಮತದಾರ ನೋಂದಣಿ ಮೊಹಾಲಿಯಲ್ಲಿದೆ ಎಂಬುದು ಅವರ ವಾದ.
ಚಡ್ಡಾ ಪ್ರತಿಕ್ರಿಯಿಸಿ, ತಾವು ಪಂಜಾಬ್ನ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದು, ಮೊಹಾಲಿಯಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವಾಗ ತಮ ಹೆಸರನ್ನು ಶಿಫ್ಟೆಡ್ ಎಂದು ಹೇಗೆ ಗುರುತಿಸಲಾಯಿತು ಎಂದು ಪ್ರಶ್ನಿಸಿದ್ದಾರೆ. ಕರಡು ಪಟ್ಟಿ ಅಂತಿಮವಲ್ಲ; ಹೀಗಾಗಿ ಕ್ಲೈಮ್ಸೌ ಅಂಡ್ ಆಬ್ಜೆಕ್ಷನ್ ಪ್ರಕ್ರಿಯೆಯ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದೂ ಅವರು ಹೇಳಿದ್ದಾರೆ.
ಚಡ್ಡಾ ಅವರ ವಾದದ ಪ್ರಕಾರ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ BLO, AERO, ERO ಮತ್ತು DEO ಹುದ್ದೆಗಳಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಇವರ ವರ್ಗಾವಣೆ, ನೇಮಕಾತಿ ಮತ್ತು ವೃತ್ತಿಜೀವನದ ಮೇಲೆ ರಾಜ್ಯ ಸರ್ಕಾರದ ಆಡಳಿತಾತಕ ನಿಯಂತ್ರಣ ಇರುವುದರಿಂದ ರಾಜಕೀಯ ಒತ್ತಡದ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳಿಂದ ಜಿಲ್ಲಾ ಚುನಾವಣಾ ಅಧಿಕಾರಿಗಳವರೆಗೆ ಎಲ್ಲರೂ ಪಂಜಾಬ್ ಸರ್ಕಾರದ ನೌಕರರಾಗಿರುವುದರಿಂದ, ರಾಜ್ಯ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿಯ ಪ್ರಮಾದ ಎಸಗಿದ್ದಾರೆ ಎಂದು ಚಡ್ಡಾ ಆರೋಪಿಸಿದ್ದಾರೆ.
ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿ ಅನಿಂದಿತಾ ಮಿತ್ರಾ ಈ ಕುರಿತು ಪ್ರತಿಕ್ರಿಯಿಸಿ, ಹೆಸರು ಅಳಿಸಿರುವ ಬಗ್ಗೆ ತಮಗೆ ತಕ್ಷಣದ ಮಾಹಿತಿ ಇಲ್ಲವೆಂದೂ, ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ವಿವರವಾದ ವರದಿ ಪಡೆದುಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಅಲ್ಲದೆ, ಸೆಪ್ಟೆಂಬರ್ 13 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಎಎಪಿ ನಾಯಕ ನೀಲ್ ಗರ್ಗ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಕ್ಷದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಬಿಜೆಪಿಯೇ ರಾಜಕೀಯ ಲಾಭಕ್ಕಾಗಿ ಈ ವಿಚಾರವನ್ನು ವಿವಾದ ಮಾಡುತ್ತಿದೆ ಎಂದು ಮರುಟೀಕೆ ಮಾಡಿದ್ದಾರೆ.
ಏಪ್ರಿಲ್ 2026 ರಲ್ಲಿ ಎಎಪಿ ತೊರೆದು ಬಿಜೆಪಿಗೆ ಸೇರಿದ್ದ ರಾಘವ್ ಚಡ್ಡಾ ಅವರ ಪ್ರಕರಣವು, ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟವನ್ನು ಬಹಿರಂಗಪಡಿಸಿದೆ. ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 2026 ರಲ್ಲಿ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ಈ ವಿವಾದವು ರಾಜ್ಯ ರಾಜಕೀಯದಲ್ಲಿ ಬಿಸಿಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.
