ನವದೆಹಲಿ/ವಾಷಿಂಗ್ಟನ್,ಸೆ.3-ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆದ 26 ನೇ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಅಂಚಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದ ಬೆನ್ನಲ್ಲೇ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಭಾರತ ಮತ್ತು ಇರಾನ್ ನಡುವೆ ಯಾವುದೇ ವ್ಯಾಪಾರ ಒಪ್ಪಂದ ಏರ್ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿರುವ ಅಮೆರಿಕ, ಇರಾನ್ ಜತೆ ವ್ಯವಹರಿಸುವ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮದ ಸುಳಿವು ನೀಡಿದೆ.
ಇರಾನ್ ದೇಶವು ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಅಥವಾ ಆದಾಯ ಗಳಿಸುವ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಯಾವುದೇ ರಾಷ್ಟ್ರಗಳು ಸಹಾಯ ಮಾಡಬಾರದು ಎಂದು ಪುನರುಚ್ಚರಿಸಿದ್ದಾರೆ. ಟೆಹ್ರಾನ್‌ಗೆ ಸಹಾಯ ಮಾಡುವ ಅಥವಾ ವ್ಯಾಪಾರ ಸಂಬಂಧ ಮುಂದುವರಿಸುವ ಯಾವುದೇ ದೇಶವಾದರೂ ಅಮೆರಿಕದ ದಂಡನೆ ಹಾಗೂ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಹಕ್ಕಿದೆ ಎಂಬುದನ್ನು ಒಪ್ಪಿಕೊಂಡರೂ, ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆ ಮತ್ತು ಭಯೋತ್ಪಾದನಾ ಪ್ರಾಯೋಜಕತ್ವಕ್ಕೆ ಆರ್ಥಿಕ ಬೆಂಬಲ ಸಿಗುವುದನ್ನು ವಾಷಿಂಗ್ಟನ್ ಸಹಿಸುವುದಿಲ್ಲ ಎಂದು ರೂಬಿಯೊ ತಿಳಿಸಿದ್ದಾರೆ. ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಆಡಳಿತದಲ್ಲಿ ಇರಾನ್‌ಗೆ ಎಂದಿಗೂ ಪರಮಾಣು ಶಸಾ್ತ್ರಸ್ತ್ರವನ್ನು ಹೊಂದಲು ಬಿಡುವುದಿಲ್ಲ ಎಂಬುದು ಅಮೆರಿಕದ ಅಚಲ ನಿರ್ಧಾರವಾಗಿದೆ. ಆರ್ಥಿಕ ದಿಗ್ಬಂಧನದ ಜೊತೆಗೆ ಅಗತ್ಯವಿದ್ದಲ್ಲಿ ಮಿಲಿಟರಿ ಬಲವನ್ನು ಬಳಸುವ ಹಕ್ಕನ್ನು ಅಮೆರಿಕ ಕಾಯ್ದಿರಿಸಿಕೊಂಡಿದೆ.
ಅಮೆರಿಕದ ನಿಲುವಿನ ಪ್ರಕಾರ, ಇರಾನ್‌ಗೆ ಹಣಕಾಸು, ತೈಲ ವ್ಯಾಪಾರ, ಸಾಗಾಟ, ತಂತ್ರಜ್ಞಾನ ಅಥವಾ ಇತರ ಮಾರ್ಗಗಳ ಮೂಲಕ ಆದಾಯ ದೊರೆತರೆ, ಆ ಸಂಪನೂಲಗಳನ್ನು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಅಥವಾ ಪರಮಾಣು ಸಾಮರ್ಥ್ಯ ವೃದ್ಧಿಗೆ ಬಳಸಬಹುದು ಎಂಬುದು ವಾಷಿಂಗ್ಟನ್‌ನ ವಾದ. ರೂಬಿಯೊ ಇದೇ ಕಾರಣಕ್ಕೆ ಇರಾನ್‌ನ ನಿರ್ಬಂಧ ತಪ್ಪಿಸುವಿಕೆಗೆ ನೆರವಾಗುವ ದೇಶಗಳನ್ನೂ ಗುರಿಯಾಗಿಸಬಹುದು ಎಂದು ಹೇಳಿದ್ದಾರೆ.
ಇದು ಕೇವಲ ರಾಜತಾಂತ್ರಿಕ ಎಚ್ಚರಿಕೆ ಮಾತ್ರವಲ್ಲ. 2026ರಲ್ಲಿ ಅಮೆರಿಕ ಈಗಾಗಲೇ ಇರಾನ್‌ಗೆ ಸಂಬಂಧಿಸಿದ ಜಾಗತಿಕ ಹಣಕಾಸು ಮತ್ತು ಸಾಗಾಟ ಜಾಲಗಳ ಮೇಲೆ ಕ್ರಮಗಳನ್ನು ವಿಸ್ತರಿಸಿದೆ. ಜುಲೈನಲ್ಲಿ ಅಮೆರಿಕದ ಖಜಾನೆ ಇಲಾಖೆ ಭಾರತ ಸೇರಿದಂತೆ ಹಲವು ದೇಶಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನೂ ಇರಾನ್‌ನೊಂದಿಗೆ ಸಂಬಂಧಿಸಿದ ನಿರ್ಬಂಧಗಳ ಪಟ್ಟಿಗೆ ಸೇರಿಸಿತ್ತು.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಜಾಗತಿಕ ದೇಶಗಳು ಇರಾನ್ ಜತೆಗಿನ ವ್ಯಹಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕ ತನ್ನ ಕಠಿಣ ನಿಲುವನ್ನು ಮತ್ತೊಮೆ ಜಗತ್ತಿಗೆ ಸಾರಿದೆ.
ರೂಬಿಯೊ ಅವರ ಹೇಳಿಕೆಯನ್ನು ಗಮನಿಸಿದರೆ, ವಾಷಿಂಗ್ಟನ್‌ನ ಗುರಿ ಭಾರತ-ಇರಾನ್ ರಾಜತಾಂತ್ರಿಕ ಸಂಪರ್ಕವನ್ನು ಸಂಪೂರ್ಣವಾಗಿ ತಡೆಯುವುದಕ್ಕಿಂತ ಇರಾನ್‌ಗೆ ಆರ್ಥಿಕವಾಗಿ ಉಸಿರಾಟದ ಅವಕಾಶ ನೀಡುವಂತಹ ವ್ಯವಸ್ಥೆಗಳನ್ನು ನಿಯಂತ್ರಿಸುವುದು ಎಂಬುದು ಸ್ಪಷ್ಟವಾಗುತ್ತದೆ.
