Homeಕ್ರೀಡಾ ಸುದ್ದಿಕ್ರಿಕೆಟ್‌ ಬೆಟ್ಟಿಂಗ್‌ ದಾಹಕ್ಕೆ ಜೀವನ ಬಲಿಯಾದೀತು ಜೋಕೆ..!

ಕ್ರಿಕೆಟ್‌ ಬೆಟ್ಟಿಂಗ್‌ ದಾಹಕ್ಕೆ ಜೀವನ ಬಲಿಯಾದೀತು ಜೋಕೆ..!

Stay away from cricket betting

-ವಿ.ರಾಮಸ್ವಾಮಿ ಕಣ್ವ
ಇಂದಿನ ಯುಗದಲ್ಲಿ ಕ್ರೀಡೆಗಳಿಗೆ ಅತ್ಯಂತ ಮಹತ್ವ ದೊರೆತಿದ್ದು ಅವುಗಳಲ್ಲಿ ಕ್ರಿಕೆಟ್‌ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಕ್ರಿಕೆಟ್‌ಗೆ ಭಾರತದಲ್ಲಷ್ಟೇ ಅಲ್ಲದೇ ವಿಶ್ವದಾದ್ಯಂತ ಅಪಾರ ಅಭಿಮಾನಿ ಗಳಿದ್ದಾರೆ.

ಇಂದಿನ ಯುವಜನತೆಗೆ ಕ್ರಿಕೆಟ್‌ ಎಂದರೆ ಅಪಾರ ಆಸಕ್ತಿ ಮತ್ತು ಅಭಿಮಾನ. ಪರೀಕ್ಷೆಗಳಿರಲಿ ಅಥವಾ ಪ್ರಮುಖ ಜವಾಬ್ದಾರಿಯುತ ಕೆಲಸಗಳಿದ್ದರೂ ಸಹ ಕೆಲವರು ಅವುಗಳನ್ನು ಬಿಟ್ಟು ಕ್ರಿಕೆಟ್‌ ಪಂದ್ಯ ನೋಡಲು ಕ್ರೀಡಾಂಗಣಗಳಿಗೆ ಹೋಗುತ್ತಾರೆ. ಕ್ರೀಡಾಭಿಮಾನದಿಂದ ಬಿಸಿಲು, ಮಳೆ, ಚಳಿ ಇದ್ಯಾವುದನ್ನು ಸಹ ಪರಿಗಣಿಸದೇ ಹೆಚ್ಚು ಹೆಚ್ಚು ಹಣ ಕೊಟ್ಟು ಟಿಕೆಟ್‌ ಪಡೆದುಕೊಂಡು ಹೋಗಿ ಆಟ ನೋಡಿ ಕುಣಿದು ಆನಂದಿಸುತ್ತಾರೆ.

ಇಂತಹವರು ನಿಜವಾದ ಕ್ರೀಡಾಭಿ ಮಾನಿಗಳು. ಆದರೆ ಕೆಲವರು ಕ್ರಿಕೆಟ್‌ ಅನ್ನು ಕೇವಲ ಕ್ರೀಡೆಯಾಗಿ ನೋಡದೇ ಅದನ್ನು ಜೂಜಾಟದ ರೂಪಕ್ಕೆ ತಂದು ಬೆಟ್ಟಿಂಗ್‌ ಕಟ್ಟುತ್ತಾರೆ. ಪ್ರಸ್ತುತ ಐಪಿಎಲ್‌ ಪಂದ್ಯಾವಳಿಗಳು ದೇಶದಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ಬೆಟ್ಟಿಂಗ್‌ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ಈ ದಂಧೆಯನ್ನು ತಡೆಗಟ್ಟಲು ದೇಶದಾದ್ಯಂತ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಲ್ಲೂ ನಮ ಬೆಂಗಳೂರು ನಗರ ಪೊಲೀಸರು ಹದ್ದಿನ ಕಣ್ಣಿಟ್ಟು ಈ ಜೂಜುಕೋರರ ಬೇಟೆ ಯಾಡುತ್ತಿದ್ದಾರೆ. ಈ ವರ್ಷ ಇಲ್ಲಿಯವರೆಗೆ 24 ಪ್ರಕರಣಗಳನ್ನು ದಾಖಲಿಸಿಕೊಂಡು 46 ಮಂದಿಯನ್ನು ಬಂಧಿಸಿದ್ದಾರೆ.

ಕಳೆದ ವರ್ಷ 43 ಪ್ರಕರಣಗಳಲ್ಲಿ 73 ಮಂದಿ ಜೂಜುಕೋರರನ್ನು ಬಂಧಿಸಿ ಮಂದಿನ ಕ್ರಮಕೈಗೊಂಡಿದ್ದಾರೆ. ಐಪಿಎಲ್‌ ಪಂದ್ಯಗಳು ನಡೆಯುವ ಸಮಯದಲ್ಲೇ ಬೆಟ್ಟಿಂಗ್‌ ಹಚ್ಚಾಗಿರುತ್ತದೆ. ತಂತ್ರಜ್ಞಾನ ಬೆಳವಣಿಗೆಯಂತೆ ಕ್ರಿಕೆಟ್‌ ಬೆಟ್ಟಿಂಗ್‌ ವಿಧಾನಗಳೂ ಕೂಡ ಬದಲಾಗಿವೆ.

ಹಿಂದಿನ ದಿನಗಳಲ್ಲಿ ಮೊಬೈಲ್‌ ಮೂಲಕ ನಡೆಸುತ್ತಿದ್ದ ಈ ಬೆಟ್ಟಿಂಗ್‌ ಈಗ ಅಕ್ರಮ ಆ್ಯಪ್‌ಗಳ ಮೂಲಕ ನಡೆಯುತ್ತಿದೆ. ಬುಕ್ಕಿಗಳು ವಿದೇಶಿ ಮೊಬೈಲ್‌ ಸಂಖ್ಯೆಗಳನ್ನು ಬಳಸಿಕೊಂಡು ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈಗ ಪ್ರತಿಯೊಂದು ಬಾಲ್‌, ಓವರ್‌, ಸೋಲು, ಗೆಲುವು, ಶತಕ, ಅರ್ಧಶತಕ ಮೇಲೆ ಬೆಟ್ಟಿಂಗ್‌ ಬಹಳ ಜೋರಾಗಿ ನಡೆಯುತ್ತಿದೆ.

ಕೆಲವು ಕೂಲಿ ಕಾರ್ಮಿಕರು ಪ್ರತಿದಿನ ತಾವು ಕಷ್ಟಪಟ್ಟು ದುಡಿದ ಹಣವನ್ನು , ವಿದ್ಯಾರ್ಥಿಗಳು ತಮ ಪೋಷಕರು ನೀಡಿದ ಖರ್ಚಿನ ಹಣವನ್ನು ಉಳಿಸಿಕೊಂಡು ನೂರಾರು ಕಿ.ಮೀ. ಸುತ್ತಾಡಿ ದುಡಿದ ಹಣವನ್ನು ಆಟೋ ಚಾಲಕರು ಹೀಗೆ ಸಮಾಜದ ಇನ್ನಿತರ ವರ್ಗಗಳ ಜನರು ತಾವು ಸಂಪಾದಿಸಿದ ಹಣವನ್ನು ಬೆಟ್ಟಿಂಗ್‌ನಲ್ಲಿ ಕಟ್ಟುತ್ತಾರೆ.

ತಮಲ್ಲಿದ್ದ ಹಣ ಎಲ್ಲಾ ಹೋದ ಮೇಲೆ ಸಾಲ ಮಾಡಿಕೊಳ್ಳುತ್ತಾರೆ. ಆಗಲೂ ಸೋತು, ಸೋತು ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ ಕೊನೆಗೊಂದು ದಿನ ಮನೆ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ಮನೆ, ಆಸ್ತಿ, ಪಾಸ್ತಿ ಮಾರಾಟ ಮಾಡಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತಹತ್ಯೆಗೂ ಮುಂದಾಗುತ್ತಾರೆ.

ಬೆಟ್ಟಿಂಗ್‌ ಕೇವಲ ಹಣಕಾಸಿನ ನಷ್ಟ ಅಲ್ಲ . ಇದು ಕುಟುಂಬಗಳಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಪತಿ, ಪತ್ನಿ ನಡುವೆ ಪ್ರತಿದಿನ ಜಗಳ, ಪೋಷಕರ ಆತಂಕ ಹಾಗೂ ಸಮಾಜಿಕವಾಗಿಯೂ ಮಾನಹಾನಿ ಮಾಡುತ್ತದೆ.

ಬೆಟ್ಟಿಂಗ್‌ ಹಣಕ್ಕಾಗಿ ಕೆಲವು ಜೂಜುಕೋರರು ಕಳ್ಳತನ, ಸುಲಿಗೆ ಮತ್ತು ವಂಚನೆಗಳಂತಹ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಆದ್ದರಿಂದ ಇದು ಇಂದು ಕೇವಲ ವೈಯಕ್ತಿಕ ಸಮಸ್ಯೆಯಾಗಿ ಉಳಿಯದೇ ಒಂದು ಗಂಭೀರ ಸಾಮಾಜಿಕ ಪಿಡುಗಾಗಿದೆ.

ಜೂಜು ಆರಂಭದಲ್ಲಿ ಆಕರ್ಷಕವಾಗಿ ಕಂಡರೂ ಅಂತ್ಯದಲ್ಲಿ ವಿನಾಶಕಾರಿಯಾಗಿರುತ್ತದೆ. ಬೆಟ್ಟಿಂಗ್‌ ಎಂಬುವುದು ಕಾನೂನುಬಾಹಿರ ಚಟುವಟಿಕೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಅದರಲ್ಲಿ ತೊಡಗಿದರೆ ಕಾನೂನು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಬಂಧನ, ಜೈಲುಶಿಕ್ಷೆ, ಮಾನಹಾನಿ ಇವುಗಳು ಮನುಷ್ಯನ ಜೀವನವನ್ನೇ ಹಾಳು ಮಾಡುತ್ತದೆ.

ಆದ್ದರಿಂದ ಕ್ರಿಕೆಟ್‌ ಅನ್ನು ಕೇವಲ ಒಂದು ಕ್ರೀಡೆಯಾಗಿ ಆನಂದಿಸಬೇಕೇ ಹೊರತು ಅದನ್ನು ಹಣ ಮಾಡುವ ದಂಧೆಯಾಗಿ ನೋಡಬಾರದು. ಕ್ರಿಕೆಟ್‌ ಒಂದು ಅತ್ಯಾದ್ಭುತ ಕ್ರೀಡೆ ಇದಕ್ಕೆ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ.

RELATED ARTICLES

Latest News