Homeಅಂತಾರಾಷ್ಟ್ರೀಯನೇಪಾಳದಲ್ಲಿ 5.6 ತೀವ್ರತೆಯ ಭೂಕಂಪ : ಪೂರ್ವ ಭಾರತ, ಭೂತಾನ್‌, ಬಾಂಗ್ಲಾದಲ್ಲೂ ಕಂಪನ

ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪ : ಪೂರ್ವ ಭಾರತ, ಭೂತಾನ್‌, ಬಾಂಗ್ಲಾದಲ್ಲೂ ಕಂಪನ

ಕಠಂಡು,ನ.24-ನೇಪಾಳದಲ್ಲಿ ಇಂದು ಬೆಳಗ್ಗೆ 5.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಪೂರ್ವ ಭಾರತ, ಭೂತಾನ್‌ ಹಾಗೂ ಬಾಂಗ್ಲಾದೇಶದ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.ನೇಪಾಳದ ರಾಷ್ಟ್ರೀಯ ಭೂಕಂಪ ಮಾನಿಟರಿಂಗ್‌ ಮತ್ತು ಸಂಶೋಧನಾ ಕೇಂದ್ರದ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ 7.17ಕ್ಕೆ ಭೂಕಂಪ ಸಂಭವಿಸಿದೆ.

ಚೀನಾ ಗಡಿಯ ಸಮೀಪವಿರುವ ನೇಪಾಳದ ಕೋಶಿ ಪ್ರಾಂತ್ಯದ ಟ್ಯಾಪ್ಲೆಜಂಗ್‌ ಜಿಲ್ಲೆಯ ಓಲಾಂಗ್‌ಚುಂಗ್‌ ಗೋಲಾ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ಇದು ರಾಜಧಾನಿ ಕಠಂಡುವಿನಿಂದ ಪೂರ್ವಕ್ಕೆ ಸುಮಾರು 275 ಕಿಲೋಮೀಟರ್‌ ದೂರದಲ್ಲಿದೆ.ಆದರೆ ಯುರೋಪಿಯನ್‌-ಮೆಡಿಟರೇನಿಯನ್‌ ಭೂಕಂಪನ ಕೇಂದ್ರ ಭೂಕಂಪದ ತೀವ್ರತೆಯನ್ನು 5.3 ಎಂದು ಅಂದಾಜಿಸಿದ್ದು, ಭೂಮಿಯ ಮೇಲೈಯಿಂದ ಸುಮಾರು 10 ಕಿಲೋಮೀಟರ್‌ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ತಿಳಿಸಿದೆ.

ಉತ್ತರ ಬಂಗಾಳದಲ್ಲೂ ಭೂಮಿ ಕಂಪನ
ನೇಪಾಳದ ಪೂರ್ವ ಭಾಗದ ಹಲವು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌, ಜಲ್ಪೈಗುರಿ ಮತ್ತು ಕೂಚ್‌ ಬೆಹಾರ್‌ ಸೇರಿದಂತೆ ಉತ್ತರ ಬಂಗಾಳದ ಕೆಲವು ಪ್ರದೇಶಗಳಲ್ಲೂ ಕಂಪನ ಉಂಟಾಗಿದೆ. ಭೂತಾನ್‌ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

ಬೆಳಗಿನ ಸಮಯದಲ್ಲಿ ಏಕಾಏಕಿ ಭೂಮಿ ಕಂಪಿಸಿದ್ದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ. ಕಟ್ಟಡಗಳು ಮತ್ತು ಮನೆಗಳಲ್ಲಿ ಕಂಪನದ ಅನುಭವವಾದ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಹೊರಬಂದಿದ್ದಾರೆ. ಆದರೆ ಭೂಕಂಪದಿಂದ ಸಂಭವಿಸಿರುವ ಹಾನಿಯ ಕುರಿತು ತಕ್ಷಣಕ್ಕೆ ಯಾವುದೇ ಅಧಿಕೃತ ವರದಿ ಲಭ್ಯವಾಗಿಲ್ಲ.

ಹಿಮಾಲಯ ವಲಯದಲ್ಲಿ ಭೂಕಂಪದ ಆತಂಕ
ನೇಪಾಳವು ಭೂಕಂಪನದ ಅಪಾಯ ಹೆಚ್ಚಿರುವ ಹಿಮಾಲಯ ಭೂಕಂಪ ವಲಯದಲ್ಲಿದೆ. ಭಾರತೀಯ ಮತ್ತು ಯುರೇಷಿಯನ್‌ ಭೂಗರ್ಭ ಫಲಕಗಳ ನಡುವಿನ ನಿರಂತರ ಚಲನೆಯಿಂದ ಈ ಪ್ರದೇಶದಲ್ಲಿ ಭೂಕಂಪಗಳು ಸಂಭವಿಸುತ್ತಿರುತ್ತವೆ. ಹೀಗಾಗಿ ನೇಪಾಳ ಸೇರಿದಂತೆ ಉತ್ತರ ಭಾರತ ಮತ್ತು ಹಿಮಾಲಯದ ಸುತ್ತಮುತ್ತಲಿನ ಪ್ರದೇಶಗಳು ಭೂಕಂಪನದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಾಗಿವೆ.

ಇತ್ತೀಚಿನ ದಿನಗಳಲ್ಲಿ ಜಪಾನ್‌ನ ಮಧ್ಯಭಾಗದಲ್ಲೂ 5.7 ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 22 ಮಂದಿ ಗಾಯಗೊಂಡಿದ್ದರು. ಅದೇ ರೀತಿ ಟಿಬೆಟ್‌ನಲ್ಲಿ ಈ ಹಿಂದೆ ಸಂಭವಿಸಿದ್ದ 7.0 ತೀವ್ರತೆಯ ಭೂಕಂಪದಲ್ಲಿ 16 ಮಂದಿ ಮೃತಪಟ್ಟಿದ್ದು, 46 ಮಂದಿ ಗಾಯಗೊಂಡಿದ್ದರು. ನೂರಾರು ಮನೆಗಳು ಹಾನಿಗೊಳಗಾಗಿದ್ದವು. ಈ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಮಂಗಳವಾರ ಸಂಭವಿಸಿರುವ ಭೂ.ಕಂಪವು ಮತ್ತೊಮೆ ಹಿಮಾಲಯ ವಲಯದ ಭೂಕಂಪನ ಅಪಾಯದ ಕುರಿತು ಆತಂಕ ಮೂಡಿಸಿದೆ.

RELATED ARTICLES

Latest News