Homeರಾಜ್ಯಸುರಂಗ ಮಾರ್ಗ ಬೇಡ ಎಂದು ರಾಹುಲ್‌ಗಾಂಧಿಗೆ ಪತ್ರ ಬರೆದ ಪರಿಸರವಾದಿ ಯಲ್ಲಪ್ಪರೆಡ್ಡಿ

ಸುರಂಗ ಮಾರ್ಗ ಬೇಡ ಎಂದು ರಾಹುಲ್‌ಗಾಂಧಿಗೆ ಪತ್ರ ಬರೆದ ಪರಿಸರವಾದಿ ಯಲ್ಲಪ್ಪರೆಡ್ಡಿ

ಬೆಂಗಳೂರು, ನ.24- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಿನಿ ಸುರಂಗ ಮಾರ್ಗ ಯೋಜನೆಗೆ ಪರಿಸರವಾದಿ ಯಲ್ಲಪ್ಪರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಈ ಯೋಜನೆಯಿಂದ ಪರಿಸರಕ್ಕೆ ಆಗುವ ಹಾನಿ ಹಾಗೂ ಸಂಚಾರ ದಟ್ಟಣೆ ನಿವಾರಣೆಯಾಗುವ ಕುರಿತ ಅನುಮಾನಗಳನ್ನು ಪ್ರಸ್ತಾಪಿಸಿ ಅವರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಕೇವಲ 2.3 ಕಿ.ಮೀ. ಉದ್ದದ ಮಿನಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ 1,300ಕ್ಕೂ ಅಧಿಕ ಮರಗಳನ್ನು ಕಡಿಯಬೇಕಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ನಾಶಪಡಿಸಿದರೂ, ಯೋಜನೆಯಿಂದ ಆ ಭಾಗದಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ಖಾತರಿ ಇಲ್ಲ. ಹೀಗಾಗಿ, ಪರಿಸರಕ್ಕೆ ಹಾನಿ ಉಂಟುಮಾಡುವ ಇಂತಹ ಯೋಜನೆ ಕೈಗೆತ್ತಿಕೊಳ್ಳುವುದು ವಿವೇಚನಾರಹಿತ ನಿರ್ಧಾರ ಎಂದು ಯಲ್ಲಪ್ಪರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು, ದುಬಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವುದು ರಾಜ್ಯ ಸರ್ಕಾರದ ದಡ್ಡತನದ ನಡೆ ಎಂದು ಅವರು ಪತ್ರದಲ್ಲಿ ಟೀಕಿಸಿದ್ದಾರೆ.ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಹಣದ ಸದ್ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಮರುಪರಿಶೀಲಿಸುವಂತೆ ಹಾಗೂ ಅದನ್ನು ಕೈಬಿಡುವಂತೆ ಸರ್ಕಾರಕ್ಕೆ ಸೂಚಿಸಲು ರಾಹುಲ್‌ ಗಾಂಧಿ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ರಸ್ತೆ ವಿಸ್ತರಣೆಯೇ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ? ಇದೇ ವೇಳೆ, ಬೆಂಗಳೂರಿನ ಸಂಚಾರ ಸಮಸ್ಯೆಗೆ ಕೇವಲ ಸುರಂಗ ಮಾರ್ಗಗಳು ಮತ್ತು ಮೇಲ್ಸೇತುವೆಗಳೇ ಪರಿಹಾರವಲ್ಲ ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ. ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಕಿರಿದಾಗಿರುವುದು, ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದು ಹಾಗೂ ಸ್ಪಷ್ಟ ನೀತಿಯ ಕೊರತೆಯೂ ಸಂಚಾರ ದಟ್ಟಣೆಗೆ ಪ್ರಮುಖ ಕಾರಣಗಳಾಗಿವೆ.

ಹೆಣ್ಣೂರು ರಸ್ತೆಯಲ್ಲಿ ಚನ್ನಕೇಶವಸ್ವಾಮಿ ದೇವಸ್ಥಾನದ ಬಳಿಯ ಹೊರ ವರ್ತುಲ ರಸ್ತೆ (ಒಆರ್‌ಆರ್‌) ಜಂಕ್ಷನ್‌ನ ಫ್ಲೈಓವರ್‌ ದಾಟಿದ ಬಳಿಕ ಆರು ಪಥಗಳ ರಸ್ತೆ ಏಕಾಏಕಿ ಕಿರಿದಾಗುತ್ತದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಪ್ರಯಾಣಿಕರು ಪ್ರತಿದಿನ ಅಮೂಲ್ಯ ಸಮಯ ಮತ್ತು ಇಂಧನ ವ್ಯರ್ಥ ಮಾಡಬೇಕಾಗಿದೆ. ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಜಿಬಿಎ ಮತ್ತು ಖಾಸಗಿ ಭೂಮಾಲೀಕರ ನಡುವೆ ಸಮನ್ವಯದ ಕೊರತೆಯೂ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.

ರಸ್ತೆ ವಿಸ್ತರಣೆಗೆ ನೀತಿಯೇ ಅಡ್ಡಿ!ಬೆಂಗಳೂರಿನಲ್ಲಿ ರಸ್ತೆ ವಿಸ್ತರಣೆ ಸಾಮಾನ್ಯವಾಗಿ ಎರಡು ವಿಧಾನಗಳಲ್ಲಿ ನಡೆಯುತ್ತದೆ. ಮೊದಲನೆಯದಾಗಿ, ಸಾರ್ವಜನಿಕ ಸಂಸ್ಥೆಗಳು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ, ಭೂಮಾಲೀಕರಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್‌) ಮೂಲಕ ಪರಿಹಾರ ಒದಗಿಸುತ್ತವೆ. ಎರಡನೆಯದಾಗಿ, ಹೊಸ ಕಟ್ಟಡ ಅಥವಾ ಬಡಾವಣೆ ನಿರ್ಮಾಣಕ್ಕೆ ಅನುಮತಿ ಪಡೆಯುವಾಗ ಮಾಲೀಕರು ರಸ್ತೆಗೆ ಅಗತ್ಯವಿರುವ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತಾರೆ.

ಆದರೆ, ಟಿಡಿಆರ್‌ ಯೋಜನೆಯಲ್ಲಿನ ಪ್ರಕ್ರಿಯೆಗಳ ಅಸ್ಪಷ್ಟತೆ ಹಾಗೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಸ್ಪಷ್ಟ ನೀತಿಯ ಕೊರತೆಯಿಂದಾಗಿ ಅನೇಕ ರಸ್ತೆ ಯೋಜನೆಗಳು ಕಾಗದದಲ್ಲೇ ಉಳಿದಿವೆ. 2007ರಲ್ಲಿ ಸಿದ್ಧಪಡಿಸಲಾದ ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2015ರಲ್ಲಿ ಗುರುತಿಸಲಾಗಿದ್ದ ಹಲವು ರಸ್ತೆಗಳು ಇಂದಿಗೂ ನಿರ್ಮಾಣವಾಗಿಲ್ಲ. ರಸ್ತೆಗಾಗಿ ಜಮೀನು ಗುರುತಿಸಲ್ಪಟ್ಟಿರುವುದರಿಂದ ಭೂಮಾಲೀಕರು ತಮ್ಮ ಆಸ್ತಿಯನ್ನು ಅಭಿವೃದ್ಧಿಪಡಿಸಲೂ ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೊರವಲಯದಲ್ಲಿ ರಸ್ತೆ ಜಾಲದ ಕೊರತೆ:
ನಗರದ ವಿಸ್ತೀರ್ಣ ಮತ್ತು ನಿರ್ಮಿತ ಪ್ರದೇಶ ಹೆಚ್ಚಾಗುತ್ತಿದ್ದರೂ, ಅದಕ್ಕೆ ಅನುಗುಣವಾಗಿ ರಸ್ತೆ ಜಾಲ ಅಭಿವೃದ್ಧಿಯಾಗಿಲ್ಲ. ಸರ್ಜಾಪುರದಲ್ಲಿ ಪ್ರತಿ ಚದರ ಕಿ.ಮೀ. ಪ್ರದೇಶಕ್ಕೆ ಸುಮಾರು 10 ಕಿ.ಮೀ. ರಸ್ತೆ ಇದ್ದರೆ, ವಿಜಯನಗರದಲ್ಲಿ 30 ಕಿ.ಮೀ. ಹಾಗೂ ಜಯನಗರದಲ್ಲಿ 23 ಕಿ.ಮೀ. ರಸ್ತೆ ಇದೆ. ವೈಟ್‌ಫೀಲ್ಡ್ , ದೊಮ್ಮಸಂದ್ರ ಮತ್ತು ದೊಡ್ಡಕನ್ನೆಹಳ್ಳಿಯಂತಹ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ರಸ್ತೆ ಸಾಂದ್ರತೆ ಇನ್ನಷ್ಟು ಕಡಿಮೆಯಿದೆ.

ಇದರಿಂದ ಕಡಿಮೆ ಅಂತರದ ಪ್ರಯಾಣಕ್ಕೂ ವಾಹನ ಸವಾರರು ಸುತ್ತುಹಾದಿಗಳನ್ನು ಅವಲಂಬಿಸಬೇಕಾಗಿದೆ. ರಸ್ತೆ ವಿಸ್ತರಣೆ, ಭೂಸ್ವಾಧೀನ ಮತ್ತು ಪರ್ಯಾಯ ಪರಿಹಾರಗಳ ಕುರಿತು ಸಮಗ್ರ ನೀತಿ ರೂಪಿಸದಿದ್ದರೆ ನಗರದ ಸಂಚಾರ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಆತಂಕವಿದೆ.ಪ್ರತ್ಯೇಕ ಭೂಸ್ವಾಧೀನ ಅಧಿಸೂಚನೆಗಾಗಿ ಕಾಯದೆ, ಭೂಮಾಲೀಕರು ಸ್ವಯಂಪ್ರೇರಣೆಯಿಂದ ಜಮೀನು ಬಿಟ್ಟುಕೊಟ್ಟು ಪರಿಹಾರ ಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವನೆಯನ್ನೂ ಸರ್ಕಾರ ಚರ್ಚಿಸಲಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News