ಮಾಸ್ಕೋ, ಫೆ. 5: ಭಾರತವು ಯಾವುದೇ ದೇಶದಿಂದ ಕಚ್ಚಾತೈಲವನ್ನು ಖರೀದಿಸಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ರಷ್ಯಾ ಹೇಳಿದೆ. ರಷ್ಯಾ ಎಂದಿಗೂ ಭಾರತದ ಏಕೈಕ ಇಂಧನ ಪಾಲುದಾರನಾಗಿರಲಿಲ್ಲ ಮತ್ತು ತೈಲ ಖರೀದಿಯ ಮೂಲಗಳಲ್ಲಿನ ಬದಲಾವಣೆಯನ್ನು ಅಸಾಮಾನ್ಯವೆಂದು ಪರಿಗಣಿಸುವುದು ತಪ್ಪು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಂತೆ, ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ದೇಶ ರಷ್ಯಾ ಅಲ್ಲ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಭಾರತವು ಯಾವಾಗಲೂ ಈ ಉತ್ಪನ್ನಗಳನ್ನು ಇತರ ದೇಶಗಳಿಂದಲೂ ಖರೀದಿಸಿದೆ. ಆದ್ದರಿಂದ, ಇದರಲ್ಲಿ ನಮಗೆ ಹೊಸದಾಗಿ ಏನೂ ಕಾಣುತ್ತಿಲ್ಲ ಎಂದು ಹೇಳಿದರು.
ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ, ಬದಲಿಗೆ ಅಮೆರಿಕ ಮತ್ತು ಬಹುಶಃ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ನಂತರ ಪೆಸ್ಕೋವ್ ಅವರ ಹೇಳಿಕೆ ಬಂದಿದೆ.
ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಮಾಸ್ಕೋಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ರಷ್ಯಾದ ವಕ್ತಾರರು ಹೇಳಿದ್ದಾರೆ. ಭಾರತದಿಂದ ಅಂತಹ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
