ವಾಷಿಂಗ್ಟನ್, ಮೇ.18- ಮಹತ್ವದ ಬೆಳವಣಿಗೆಯಲ್ಲಿ ಇರಾನ್ ಮೇಲೆ ನಡೆಸಲು ಉದ್ದೇಶಿಸಿದ್ದ ಸೇನಾ ದಾಳಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಗಂಭೀರ ಮಟ್ಟದ ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಅವರು ಇರಾನ್ ಒಪ್ಪಂದಕ್ಕೆ ಬರದಿದ್ದರೆ ಯುದ್ಧ ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಇಂದು ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಯೋಜಿಸಲಾಗಿದ್ದ ದಾಳಿಯ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ಆದರೆ ಸಮಂಜಸವಾದ ಒಪ್ಪಂದಕ್ಕೆ ಬರದಿದ್ದರೆ, ಅಗತ್ಯವಾದ ಕ್ಷಣದಲ್ಲೇ ಇರಾನ್ ಮೇಲೆ ಸಂಪೂರ್ಣ ಪ್ರಮಾಣದ ಭಾರಿ ದಾಳಿಗೆ ಮುಂದಾಗಲು ಅಮೆರಿಕ ಸೇನೆಯನ್ನು ಸಿದ್ಧವಾಗಿರಲು ಸೂಚಿಸಿದ್ದೇನೆ ಎಂದು ತಿಳಿಸಿದ್ದರು.
ಮೇ.19ರಂದು ದಾಳಿ ನಡೆಸುವ ಯೋಜನೆ ಬಗ್ಗೆ ಟ್ರಂಪ್ ಈ ಹಿಂದೆ ಬಹಿರಂಗಪಡಿಸಿರಲಿಲ್ಲ. ಆದರೆ ಕಳೆದ ವಾರಾಂತ್ಯದಲ್ಲಿ, ಇರಾನ್‌ಗೆ ಸಮಯ ವೇಗವಾಗಿ ಮುಗಿಯುತ್ತಿದೆ. ಅವರು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅವರಿಗೆ ಏನೂ ಉಳಿಯುವುದಿಲ್ಲೞೞ ಎಂದು ಎಚ್ಚರಿಸಿದ್ದರು.
ಏಪ್ರಿಲ್ ಮಧ್ಯಭಾಗದಲ್ಲಿ ನಡೆದ ಕದನ ವಿರಾಮ ಒಪ್ಪಂದವು ಇರಾನ್ ಒಪ್ಪಂದಕ್ಕೆ ಬರದಿದ್ದರೆ ಅಂತ್ಯಗೊಳ್ಳಬಹುದು ಎಂದು ಟ್ರಂಪ್ ಹಲವು ವಾರಗಳಿಂದ ಹೇಳುತ್ತಿದ್ದರು.ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ಕತಾರ್, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನಾಯಕರ ಮನವಿಯ ಮೇರೆಗೆ ಯೋಜಿತ ದಾಳಿಯನ್ನು ಕೈಬಿಟ್ಟಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಈ ಹಿಂದೆ ಕೂಡ ಇರಾನ್‌ಗೆ ಹಲವು ಗಡುವುಗಳನ್ನು ನೀಡಿದ್ದರೂ, ನಂತರ ತಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದರು.ಇತ್ತೀಚಿನ ದಿನಗಳಲ್ಲಿ ಟ್ರಂಪ್, ಇರಾನ್ ಯುದ್ಧದ ವಿಚಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿಯೂ ವರದಿಯಾಗಿದೆ.ಒಟ್ಟಾರೆ ಇಡೀ ವಿಶ್ವ ನಾಯಕರು ಅಮೆರಿಕ ದಾಳಿ ಬಗ್ಗೆ ಆತಂಕ ವ್ಯಕ್ತಪಡಿಸಿ ಯುದ್ದ ಸಂಪೂರ್ಣ ನಿಲ್ಲಿಸಲು ಮನವಿ ಮಾಡುತ್ತಿದ್ದರು.
