ನವದೆಹಲಿ, ಮೇ.19-ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಮತ್ತೆ ಇಂದು ಪ್ರತಿ ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಿಸಲಾಗಿದೆ. ಒಂದು ವಾರದೊಳಗೆ ಇದು ಎರಡನೇ ಬಾರಿ ದರ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 97.77ರಿಂದ 98.64ಕ್ಕೆ ಏರಿಕೆಯಾಗಿದೆ. ಡೀಸೆಲ್ ದರವು 90.67ರಿಂದ 91.58ಕ್ಕೆ ಹೆಚ್ಚಳವಾಗಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಕಳೆದ ಶುಕ್ರವಾರ ಇಂಧನ ದರದಲ್ಲಿ ಪ್ರತಿ ಲೀಟರ್‌ಗೆ 3 ಹೆಚ್ಚಳ ಮಾಡಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಮೆ ದರ ಏರಿಕೆ ಮಾಡಲಾಗಿದೆ.ಮುಂಬೈನಲ್ಲಿ ಪೆಟ್ರೋಲ್ ದರವು 91 ಪೈಸೆ ಏರಿಕೆಗೊಂಡು 107.59 ಪ್ರತಿ ಲೀಟರ್ ಆಗಿದ್ದು, ಡೀಸೆಲ್ ದರವು 94 ಪೈಸೆ ಹೆಚ್ಚಾಗಿ 94.08ಕ್ಕೆ ತಲುಪಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ದರದಲ್ಲಿ ಅತಿಹೆಚ್ಚು 96 ಪೈಸೆ ಏರಿಕೆ ದಾಖಲಾಗಿದ್ದು, ಪ್ರತಿ ಲೀಟರ್‌ಗೆ 109.70 ಆಗಿದೆ. ಡೀಸೆಲ್ ದರವು 94 ಪೈಸೆ ಏರಿಕೆಯಾಗಿ 96.07ಕ್ಕೆ ತಲುಪಿದೆ.ಚೆನ್ನೈನಲ್ಲಿ ಪೆಟ್ರೋಲ್ ದರವು 82 ಪೈಸೆ ಹೆಚ್ಚಾಗಿ 104.49 ಆಗಿದ್ದು, ಡೀಸೆಲ್ ದರವು 86 ಪೈಸೆ ಏರಿಕೆ ಕಂಡು 96.11 ಪ್ರತಿ ಲೀಟರ್ ಆಗಿದೆ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ 106 ರಿಂದ 107ಕ್ಕೆ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಿಂದ ಸಾರಿಗೆ ವಲಯದಲ್ಲಿ ಪ್ರಯಾಣ ದರ ಹೆಚ್ಚಳವಾಗಿದ್ದು ಈಗ ಸರಕು ಸಾಗಣೆ ಕೂಡ ದುಭಾರಿಯಾಗಲಿದೆ.
