ವಾಷಿಂಗ್ಟನ್, ಮೇ 29 – ಅಮೆರಿಕ ಮತ್ತು ಇರಾನ್ ನಡುವಿನ ಮೂರು ತಿಂಗಳ ಯುದ್ಧಕ್ಕೆ ಸಂಬಂಧಿಸಿದ ಯುದ್ಧ ವಿರಾಮವನ್ನು ಇನ್ನೂ 60 ದಿನಗಳ ಕಾಲ ವಿಸ್ತರಿಸುವ ಹಾಗೂ ಇರಾನ್‌ನ ಅಣು ಕಾರ್ಯಕ್ರಮ ಕುರಿತು ಹೊಸ ಹಂತದ ಮಾತುಕತೆ ಆರಂಭಿಸುವ ಬಗ್ಗೆ ಎರಡೂ ದೇಶಗಳ ಮಾತುಕತಾಕಾರರು ತಾತ್ಕಾಲಿಕ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಈ ಒಪ್ಪಂದವನ್ನು ಇರಾನ್ ತಕ್ಷಣವೇ ದೃಢಪಡಿಸಿಲ್ಲ. ಜೊತೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ಅಮೆರಿಕ-ಇರಾನ್ ನಡುವಿನ ನಾಜೂಕಾದ ಯುದ್ಧ ವಿರಾಮ ಮತ್ತೆ ಅಸ್ಥಿರವಾಗುತ್ತಿರುವ ಲಕ್ಷಣಗಳು ಕಾಣಿಸಿಕೊಂಡಿವೆ. ಇತ್ತೀಚೆಗೆ ಕುವೈತ್ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸಿದ್ದು, ಅವನ್ನು ಕುವೈತ್ ವಾಯು ರಕ್ಷಣಾ ವ್ಯವಸ್ಥೆ ತಡೆದಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ತಾತ್ಕಾಲಿಕ ಒಪ್ಪಂದದ ಪ್ರಕಾರ, ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಸುಂಕ ವಿಧಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, 30 ದಿನಗಳೊಳಗೆ ಆ ಜಲಮಾರ್ಗದಲ್ಲಿ ಅಳವಡಿಸಿರುವ ಎಲ್ಲಾ ಸ್ಫೋಟಕ ಗಣಿಗಳನ್ನು ತೆರವುಗೊಳಿಸಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.
ಯುದ್ಧದ ಅವಧಿಯಲ್ಲಿ ಇರಾನ್ ಈ ಜಲಸಂಧಿಯನ್ನು ಬಹುತೇಕ ಬಂದ್ ಮಾಡಿತ್ತು. ವಿಶ್ವದ ಸುಮಾರು ಐದನೇ ಒಂದು ಭಾಗದ ತೈಲ ಮತ್ತು ನೈಸರ್ಗಿಕ ಅನಿಲ ವ್ಯಾಪಾರ ಈ ಮಾರ್ಗದ ಮೂಲಕ ಸಾಗುತ್ತಿದ್ದು, ಅದರ ಮುಚ್ಚುವಿಕೆಯಿಂದ ಜಾಗತಿಕ ತೈಲ ಬೆಲೆಗಳು ಭಾರೀ ಏರಿಕೆಯಾಗಿದ್ದವು.
ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಒಪ್ಪಂದ ಅಂತಿಮಗೊಂಡರೆ ತೈಲದ ಬೆಲೆಗಳು ಬಹಳ ವೇಗವಾಗಿ ಇಳಿಯಬಹುದು ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕೆಲವು ವಾಣಿಜ್ಯ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿತ್ತು. ಯುದ್ಧಕ್ಕೂ ಮೊದಲು ದಿನಕ್ಕೆ 100ಕ್ಕೂ ಹೆಚ್ಚು ಹಡಗುಗಳು ಸಾಗುತ್ತಿದ್ದರೆ, ಈಗ ಸುಮಾರು 24 ಹಡಗುಗಳು ಮಾತ್ರ ಸಂಚರಿಸುತ್ತಿವೆ ಎಂದು ವರದಿಯಾಗಿದೆ.
ಇರಾನ್ ಕೆಲ ಹಡಗುಗಳಿಂದ ಸುಂಕ ವಸೂಲಿ ಮಾಡುತ್ತಿದ್ದುದಲ್ಲದೆ, ಈ ತಿಂಗಳ ಆರಂಭದಲ್ಲಿ ಪ್ರತ್ಯೇಕ ಮೇಲ್ವಿಚಾರಣಾ ಸಂಸ್ಥೆಯನ್ನೂ ಸ್ಥಾಪಿಸಿತ್ತು. ಇದರ ಬೆನ್ನಲ್ಲೇ ಅಮೆರಿಕ ಹೊಸ ನಿರ್ಬಂಧಗಳನ್ನು ವಿಧಿಸಿತ್ತು.
ನಿರ್ಬಂಧ ಸಡಿಲಿಕೆಗೆ ಅಮೆರಿಕ ಒಪ್ಪಿಗೆ:
ತಾತ್ಕಾಲಿಕ ಒಪ್ಪಂದದಡಿ ಅಮೆರಿಕ, ಇರಾನ್ ಬಂದರುಗಳ ಮೇಲಿನ ತನ್ನ ನೌಕಾ ನಿರ್ಬಂಧವನ್ನು ಹಂತ ಹಂತವಾಗಿ ತೆಗೆದುಹಾಕಲು ಹಾಗೂ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸಲು ಒಪ್ಪಿದೆ. ಇದರಿಂದ ಇರಾನ್ ಹೆಚ್ಚು ತೈಲ ಮಾರಾಟ ಮಾಡಲು ಅವಕಾಶ ಸಿಗಲಿದೆ.ಆದರೆ ಇದೇ ವೇಳೆ ಅಮೆರಿಕ ಖಜಾನೆ ಇಲಾಖೆ ಇರಾನ್ ಸೇನೆಯ ತೈಲ ಮಾರಾಟ ಘಟಕದ ಮೇಲೆ ಹೊಸ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.
ಇದರ ನಡುವೆ 60 ದಿನಗಳ ಯುದ್ಧ ವಿರಾಮ ಅವಧಿಯಲ್ಲಿ ಚರ್ಚೆಯಾಗಲಿರುವ ಪ್ರಮುಖ ವಿಷಯಗಳಲ್ಲಿ ಒಂದು ಇರಾನ್‌ನ ಹೆಚ್ಚಿನ ಶುದ್ಧೀಕರಿಸಿದ ಯುರೇನಿಯಂ ಸಂಗ್ರಹವಾಗಿದೆ.ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಪ್ರಕಾರ, ಇರಾನ್ ಬಳಿ ಶಸ್ತ್ರಾಸ್ತ್ರ ತಯಾರಿಕೆಗೆ ಅಗತ್ಯವಿರುವ ಮಟ್ಟದ ಸಮೀಪವಾದ 60 ಶೇಕಡಾ ಶುದ್ಧತೆಯ 440.9 ಕಿಲೋಗ್ರಾಂ ಯುರೇನಿಯಂ ಸಂಗ್ರಹವಿದೆ. ಈ ಯುರೇನಿಯಂ ಸಂಗ್ರಹವನ್ನು ಚೀನಾ ಅಥವಾ ರಷ್ಯಾ ವಶಕ್ಕೆ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದ್ದರೂ, ಟ್ರಂಪ್ ಅದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
