ರಾಯವರಂ,ಮಾ.26- ಆಂಧ್ರ ಪ್ರದೇಶ ಮಾರ್ಕಾಪುರಂ ಜಿಲ್ಲೆಯಲ್ಲಿ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿ ಸಂಭವಿಸಿದ ಭೀಕರ ದುರಂತದಲ್ಲಿ 14 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ. ಅತಿ ವೇಗವಾಗಿ ಬರುತ್ತಿದ್ದ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ಗೆ ಬೆಂಕಿ ತಗುಲಿ, ಹಲವಾರು ಪ್ರಯಾಣಿಕರು ಸಿಲುಕಿಕೊಂಡು ದಹನಗೊಂಡಿದ್ದಾರೆ ಎಂದು ಮಾರ್ಕಾಪುರಂ ಪೊಲೀಸ್ ಅಧೀಕ್ಷಕ ವಿ. ಹರ್ಷವರ್ಧನ್ ರಾಜು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 23 ಗಾಯಾಳುಗಳನ್ನು ಗುಂಟೂರು ಆಸ್ಪತ್ರೆಗೆ ಸಾಗಿಸಲಾಗಿದ್ದು ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.ಜಗಿತ್ಯಾಲ (ತೆಲಂಗಾಣ)ದಿಂದ ನೆಲ್ಲೂರು ಜಿಲ್ಲೆಯ ಕಾಲಿಗಿರಿ ಕಡೆಗೆ ಸುಮಾರು 40 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್‌ಗೆ ಏಕಾಏಕಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡದಿದೆ
.
ನಂತರ ಕೆಲ ಪ್ರಯಾಣಿಕರು ಹೊರಗೆ ಬರಲು ಪ್ರಯತ್ನಿಸಿದ್ದಾರೆ. ಆದರೆ ಕೆಲವರು ಗಾಯದ ಪರಿಣಾಮ ಬೇಗ ಹೊರಗೆ ಬರಲಾಗದೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿದ್ದಾರೆ.ಹೈದರಾಬಾದ್‌ನ ಹರಿಕೃಷ್ಣ ಖಾಸಗಿ ಟ್ರಾವೆಲ್ ಬಸ್ ತಡ ರಾತ್ರಿ ಹೊರಟಿತ್ತು. ಮಾರ್ಗಮಧ್ಯ ಬೆಳಿಗ್ಗೆ ದುರಂತಕ್ಕೀಡಾಗಿದೆ. ಮೃತರಲ್ಲಿ ಕೆಲವರು ಸಜೀವ ದಹನಗೊಂಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಕಣಿಗಿರಿ ಮತ್ತು ಪಾಮೂರ್ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.ಮೃತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಪ್ರಯಾಣಿಕರ ವಸ್ತುಗಳೂ ಕೂಡ ಸುಟ್ಟು ನಾಶವಾಗಿದೆ.ಎರಡು ವಾಹನಗಳ ಚಾಲಕರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಸ್ ಹಾಗೂ ಟಿಪ್ಪರ್ ಸುಟ್ಟುಹೋಗಿದ್ದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಸಂಪೂರ್ಣವಾಗಿ ನಂದಿಸಿದ್ದಾರೆ,ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಈ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿ, ಮೃತರ ಬಗ್ಗೆ ಸಂತಾಪ ಸೂಚಿಸಿದ್ದಾರೆ.ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದು, ಘಟನೆಗೆ ಸಂಬಂಧಿಸಿದ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.3 ತಿಂಗಳ ಹಿಂದೆ ಇದೇ ರೀತಿ ಬಸ್ ಬೆಂಕಿ ಅಪಘಾತದಲ್ಲಿ 16 ಜನರು ಸಜೀವ ದಹನಗೊಂಡಿದ್ದರು.
