Sunday, May 3, 2026
Homeರಾಷ್ಟ್ರೀಯಪೂರ್ವ ದೆಹಲಿಯ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ, 9 ಮಂದಿ ಸಾವು

ಪೂರ್ವ ದೆಹಲಿಯ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ, 9 ಮಂದಿ ಸಾವು

9 dead as fire breaks out in four-storey residential building in east Delhi

ನವದೆಹಲಿ, ಮೇ 3- ಪೂರ್ವ ದೆಹಲಿಯ ವಿವೇಕ್‌ ವಿಹಾರ್‌ಪ್ರದೇಶದಲ್ಲಿರುವ ವಸತಿ ಕಟ್ಟಡದಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಮುಂಜಾನೆ ಸುಮಾರು 4 ಗಂಟೆಗೆ ವಿವೇಕ್‌ ವಿಹಾರ್‌ ಫೇಸ್‌‍-1ರ ನಾಲ್ಕು ಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಪೊಲೀಸ್‌‍, ಅಗ್ನಿಶಾಮಕ ದಳ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಬೆಂಕಿ ಎರಡು,ಮೂರು ಹಾಗೂ ನಾಲ್ಕನೇ ಮಹಡಿಗಳ ಫ್ಲಾಟ್‌ಗಳಿಗೆ ವ್ಯಾಪಿಸಿದ್ದು, ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಅಗ್ನಿಶಾಮಕ ಕಾರ್ಯಾಚರಣೆ ವೇಳೆ ಸುಮಾರು 10ರಿಂದ 15 ಮಂದಿಯನ್ನು ರಕ್ಷಿಸಲಾಗಿದೆ. ಸಣ್ಣ ಗಾಯಗಳಾಗಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿ ತಿಳಿಸಿದ್ದಾರೆ.

ಒಟ್ಟು 12 ಅಗ್ನಿಶಾಮಕ ವಾಹನಗಳನ್ನು ಬೆಂಕಿ ನಂದಿಸಲು ಬಳಸಲಾಗಿದ್ದು,ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.ಹಲವು ಗಂಟೆಗಳ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಅಗ್ನಿಶಾಮಕ ದಳ ಮೊದಲ ಮಹಡಿಯಿಂದ ಒಬ್ಬರು, ಎರಡನೇ ಮಹಡಿಯಿಂದ ಐದು ಮಂದಿ ಮತ್ತು ಬೀಗ ಹಾಕಲಾಗಿದ್ದ ಮೆಟ್ಟಿಲುಗಳಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತರನ್ನು ಅರವಿಂದ್‌ ಜೈನ್‌ (60), ಅವರ ಪತ್ನಿ ಅನಿತಾ ಜೈನ್‌ (58), ಮಗ ನಿಶಾಂತ್‌ ಜೈನ್‌ (35), ಸೊಸೆ ಅಂಚಲ್‌ ಜೈನ್‌ (33) ಮತ್ತು ಮೊಮಗ ಆಕಾಶ್‌ ಜೈನ್‌ ಎಂದು ಗುರುತಿಸಲಾಗಿದೆ.ಮೂರನೇ ಮಹಡಿಯಲ್ಲಿ, ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿದ್ದು ಅವರನ್ನು ನಿತಿನ್‌ ಜೈನ್‌ (50), ಪತ್ನಿ ಶೈಲೇ ಜೈನ್‌ (48) ಮತ್ತು ಮಗ ಸಮ್ಯಕ್‌ ಜೈನ್‌ (25) ಎಂದು ಗುರುತಿಸಲಾಗಿದೆ.

ಮೊದಲ ಮಹಡಿಯಲ್ಲಿ ಶಿಖಾ ಜೈನ್‌ (45) ಎಂದು ಗುರುತಿಸಲಾದ ಮಹಿಳೆ ಮೃತಪಟ್ಟಿದ್ದು, ಅವರ ಪತಿ ನವೀನ್‌ ಜೈನ್‌ (48) ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪ್ರಸ್ತುತ ಭೀಕರ ದುರಂತದ ಬಗ್ಗೆ ತನಿಖೆ ಆರಂಭವಾಗಿದೆ ಸದ್ಯ ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News