Homeರಾಷ್ಟ್ರೀಯಮತ್ತೊಬ್ಬ ಎಐಎಡಿಎಂಕೆ ಶಾಸಕ ರಾಜೀನಾಮೆ

ಮತ್ತೊಬ್ಬ ಎಐಎಡಿಎಂಕೆ ಶಾಸಕ ರಾಜೀನಾಮೆ

Another AIADMK MLA resigns

ಚೆನ್ನೈ(ತಮಿಳುನಾಡು),ಮೇ26- ತಮಿಳುನಾಡಿನಲ್ಲಿ ಶಾಸಕರ ರಾಜೀನಾಮೆ ಪರ್ವ ಮತ್ತೆ ಮುಂದುವರೆದಿದ್ದು, ಎಐಎಡಿಎಂಕೆ ಪಕ್ಷದ ಅಂಬಸಮುದ್ರಂ ವಿಧಾನಸಭಾ ಕ್ಷೇತ್ರದ ಪಕ್ಷದ ಶಾಸಕ ಎಸಕ್ಕಿ ಸುಬಯಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಇದರಿಂದ ಎಐಎಡಿಎಂಕೆಗೆ ಮತ್ತೊಮೆ ಭಾರೀ ಹಿನ್ನಡೆಯಾಗಿದ್ದು, ಮೂಲಗಳ ಪ್ರಕಾರ ಇನ್ನು ಕೆಲವು ಶಾಸಕರು ರಾಜೀನಾಮೆ ನೀಡುವ ಸರತಿಯಲ್ಲಿದ್ದಾರೆ ಎಂದು ಗೊತ್ತಾಗಿದೆ. ಸುಬಯಾ ತಮಿಳುನಾಡು ವಿಧಾನಸಭಾ ಸ್ಪೀಕರ್‌ ಜೆಸಿಡಿ ಪ್ರಭಾಕರ್‌ ಅವರನ್ನು ಇಂದು ಭೇಟಿ ಮಾಡಿ ತಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸೋಮವಾರವಷ್ಟೇ ಮೂವರು ಶಾಸಕರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಿಧಾನಸಭಾ ನಿಯಮಗಳನ್ನು ಪಾಲಿಸದ ಕಾರಣ ಸುಬಯಾ ಅವರ ರಾಜೀನಾಮೆ ಪತ್ರವನ್ನು ಆರಂಭದಲ್ಲಿ ಸ್ವೀಕರಿಸಲು ನಿರಾಕರಿಸಿದ ನಂತರ, ಶಾಸಕರು ಕೈಬರಹದ ಪತ್ರವನ್ನು ಸಲ್ಲಿಸಿದ್ದು,ಸ್ಪೀಕರ್‌ ಪ್ರಭಾಕರ್‌ ಅದನ್ನು ಸ್ವೀಕರಿಸಿದರು.

ಶಾಸಕರು ಚೆನ್ನೈನ ಸಚಿವಾಲಯಕ್ಕೆ ಆಗಮಿಸಿ ಸ್ಪೀಕರ್‌ಗೆ ಟೈಪ್‌ ಮಾಡಿದ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ಪತ್ರವು ವಿಧಾನಸಭೆಯ ಕಾರ್ಯವಿಧಾನಗಳಿಗೆ ಅನುಗುಣವಾಗಿಲ್ಲದ ಕಾರಣ, ಅದನ್ನು ತಿರಸ್ಕರಿಸಲಾಯಿತು. ನಂತರ ಸುಬಯಾ ಟೈಪ್‌ ಮಾಡಿದ ಪತ್ರವನ್ನು ಹಿಂಪಡೆದು ಕೆಲವೇ ನಿಮಿಷಗಳಲ್ಲಿ ಕೈಬರಹದ ರಾಜೀನಾಮೆ ಪತ್ರ ಸಲ್ಲಿಸಿದಾಗ ಸ್ಪೀಕರ್‌ ಸ್ವೀಕರಿಸಿದರು.

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸುಬಯಾ ಅವರು ಅಂಬಸಮುದ್ರಂ ಕ್ಷೇತ್ರವನ್ನು 10,245 ಮತಗಳ ಅಂತರದಿಂದ ಕಾಂಗ್ರೆಸ್‌‍ ಅಭ್ಯರ್ಥಿ ವಿ.ಪಿ. ದುರೈ ಅವರನ್ನು ಸೋಲಿಸುವ ಮೂಲಕ ಗೆದ್ದರು. ಸುಬಯಾ 65,5899 ಮತಗಳನ್ನು ಪಡೆದರೆ, ದುರೈ 55,344 ಮತಗಳನ್ನು ಪಡೆದರು. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ಎಸ್‌‍.ರಾಜಗೋಪಾಲ್‌ 53,611 ಮತಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಮಾಜಿ ರಾಜ್ಯ ಸಚಿವರಾದ ಸಿ.ವಿ.ಷಣುಗಂ ಮತ್ತು ಎಸ್‌‍.ಪಿ.ವೇಲುಮಣಿ ಅವರನ್ನು ಬೆಂಬಲಿಸುವ ಪಕ್ಷಾಂತರಗೊಂಡ ಶಾಸಕರಲ್ಲಿ ಸುಬಯಾ ಕೂಡ ಒಬ್ಬರು ಮತ್ತು ಮೇ 13 ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯ ಸಮಯದಲ್ಲಿ ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರು.

ಮೂವರು ಬಂಡಾಯ ಶಾಸಕರು ರಾಜೀನಾಮೆ
ಬಂಡಾಯ ಬಣದ ಮೂವರು ಶಾಸಕರು ಸ್ಪೀಕರ್‌ ಅವರನ್ನು ಭೇಟಿಯಾದ ನಂತರ ವಿಧಾನಸಭೆಗೆ ರಾಜೀನಾಮೆ ನೀಡಿ ನಂತರ ಟಿವಿಕೆ ಸೇರಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಎಐಎಡಿಎಂಕೆ ಶಾಸಕರಾದ ಮರಗತಮ್‌ ಕುಮಾರವೇಲ್‌, ಪಿ.ಸತ್ಯಭಾಮ ಮತ್ತು ಎಸ್‌‍ ಜಯಕುಮಾರ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಸೋಮವಾರ ಸಂಜೆ ಟಿವಿಕೆ ಸೇರಿದರು.

ಪಕ್ಷದ ಮೂಲವೊಂದು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದು, ಮುಂಬರುವ ಉಪಚುನಾವಣೆಯಲ್ಲಿ ಪಕ್ಷದ ಶಿಳ್ಳೆ ಚಿಹ್ನೆಯ ಮೇಲೆ ಸ್ಪರ್ಧಿಸಲು ಈ ಮೂವರಿಗೆ ಟಿವಿಕೆ ಟಿಕೆಟ್‌ ಸಿಗುವ ಸಾಧ್ಯತೆಯಿದೆ.
ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಟಿವಿಕೆ ಬೆಂಬಲವಾಗಿ ಮತ ಚಲಾಯಿಸಿದ 25 ಶಾಸಕರಲ್ಲಿ ಈ ಮೂವರು ನಾಯಕರೂ ಸೇರಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಕೊರತೆ ಅನುಭವಿಸಿದ್ದ ವಿಜಯ್‌ ಅವರ ಪಕ್ಷಕ್ಕೆ ಇದು ದೊಡ್ಡ ಉತ್ತೇಜನ ನೀಡಿದೆ. ತಮಿಳುನಾಡು ಸರ್ಕಾರ ಮೂರು ವಿಧಾನಸಭಾ ಸ್ಥಾನಗಳನ್ನು ಖಾಲಿ ಇರುವಂತೆ ಘೋಷಿಸಿದೆ.

ಏತನಧ್ಯೆ, ಎಐಎಡಿಎಂಕೆಯ ಮೂವರು ಶಾಸಕರು ರಾಜೀನಾಮೆ ನೀಡಿದ ನಂತರ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಖಾಲಿ ಇರುವ ಸ್ಥಾನಗಳ ಬಗ್ಗೆ ತಮಿಳುನಾಡು ವಿಧಾನಸಭಾ ಸಚಿವಾಲಯ ಇಂದು ಚುನಾವಣಾ ಆಯೋಗಕ್ಕೆ ಔಪಚಾರಿಕವಾಗಿ ಮಾಹಿತಿ ನೀಡಿದೆ. ಖಾಲಿ ಇರುವ ಮೂರು ಕ್ಷೇತ್ರಗಳು ಮಧುರಾಂತಕಂ, ಧಾರಪುರಂ ಮತ್ತು ಪೆರುಂಡುರೈ.

RELATED ARTICLES

Latest News