Homeರಾಷ್ಟ್ರೀಯತಮಿಳುನಾಡು ಸಿಎಂ ದಳಪತಿ ವಿಜಯ್‌ಗೆ ಶುರುವಾಯ್ತು ತಲೆನೋವು

ತಮಿಳುನಾಡು ಸಿಎಂ ದಳಪತಿ ವಿಜಯ್‌ಗೆ ಶುರುವಾಯ್ತು ತಲೆನೋವು

CPI(M) threatens to withdraw support if Vijay inducts AIADMK MLAs into cabinet

ಚೆನ್ನೈ, ಮೇ 20 ಎಐಎಡಿಎಂಕೆ ಬಂಡಾಯ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌‍ ಪಡೆಯಬೇಕಾಗುತ್ತದೆ ಎಂದು ಸಿಪಿಐ(ಎಂ) ಪಕ್ಷ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್‌ ಅವರಿಗೆ ಎಚ್ಚರಿಕೆ ನೀಡಿದೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ 10 ಸ್ಥಾನಗಳು ಕಡಿಮೆಯಿದ್ದ ಕಾರಣ ಕಾಂಗ್ರೆಸ್‌‍, ಎಡಪಕ್ಷಗಳು, ವಿಸಿಕೆ ಮತ್ತು ಐಯುಎಂಎಲ್‌ ಪಕ್ಷಗಳು ವಿಜಯ್‌ ಅವರಿಗೆ ಹೊರಗಿನಿಂದ ಬೆಂಬಲ ನೀಡಿದ್ದವು.

ಆದರೆ, ತಮ್ಮ ಸರ್ಕಾರವನ್ನು ಮತ್ತಷ್ಟು ಸ್ಥಿರಗೊಳಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಸಿಎಂ ವಿಜಯ್‌ ಅವರು, ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ ಪಕ್ಷದಿಂದ ಬಂಡಾಯವೆದ್ದು ವಿಶ್ವಾಸಮತದ ವೇಳೆ ತಮಗೆ ಅಡ್ಡ ಮತ ಚಲಾಯಿಸಿದ್ದ 25 ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸಿಪಿಐ (ಎಂ) ಪಕ್ಷ ಬೆಂಬಲ ವಾಪಸ್‌‍ ಪಡೆಯುವ ಬೆದರಿಕೆ ಹಾಕಿದೆ.

ಪತ್ರಿಕಾಗೋಷ್ಠಿ ನಡೆಸಿದ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಅವರು, ಸಿಎಂ ವಿಜಯ್‌ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮಿಳುನಾಡು ಮತ್ತೊಂದು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿಲ್ಲದ ಕಾರಣ ಮತ್ತು ರಾಷ್ಟ್ರಪತಿ ಆಳ್ವಿಕೆ ಹೇರಿ ಬಿಜೆಪಿಯು ಹಿಂಬಾಗಿಲಿನಿಂದ ರಾಜ್ಯವನ್ನು ಆಳಬಾರದು ಎಂಬ ಒಂದೇ ಉದ್ದೇಶದಿಂದ ನಾವು ಟಿವಿಕೆಯನ್ನು ಬೆಂಬಲಿಸಿದ್ದೆವು. ಈ ಬಾರಿಯ ಜನಾಭಿಪ್ರಾಯ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಜಯ್‌ ಅವರು ಸ್ವಚ್ಛ ಮತ್ತು ಉತ್ತಮ ಸರ್ಕಾರ ನಡೆಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಅವರೇನಾದರೂ ಎಐಎಡಿಎಂಕೆಯ ಯಾವುದೇ ಬಣ ಅಥವಾ ಬಂಡಾಯ ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡರೆ, ಅದು ಜನಾದೇಶಕ್ಕೆ ಮಾಡುವ ದ್ರೋಹವಾಗುತ್ತದೆ. ಅಂತಹ ನಿರ್ಧಾರ ಕೈಗೊಂಡರೆ ನಾವು ಖಂಡಿತವಾಗಿಯೂ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸಿ, ವಾಪಸ್‌‍ ಪಡೆಯುತ್ತೇವೆ ಎಂದು ಗುಡುಗಿದ್ದಾರೆ.

ಒಂದು ವೇಳೆ ಸಿಎಂ ವಿಜಯ್‌ ಅವರು ಎಐಎಡಿಎಂಕೆ ಬಂಡಾಯ ಶಾಸಕರಿಗೆ ಮಣೆ ಹಾಕಿದರೆ, ಮೈತ್ರಿಕೂಟದಲ್ಲಿ ಭಾರಿ ಬಿರುಕು ಮೂಡುವುದು ನಿಶ್ಚಿತ. ಸಿಪಿಐ ಬೆಂಬಲ ಹಿಂತೆಗೆದುಕೊಂಡರೆ, ಕಾಂಗ್ರೆಸ್‌‍ನ 5 ಶಾಸಕರನ್ನು ಹೊರತುಪಡಿಸಿ, ಉಳಿದ ನಾಲ್ಕು ಮಿತ್ರಪಕ್ಷಗಳ ಒಟ್ಟು 8 ಶಾಸಕರು ತಕ್ಷಣವೇ ಸರ್ಕಾರದಿಂದ ಹೊರಬರಲಿದ್ದಾರೆ.ಈ ಪರಿಸ್ಥಿತಿಯಲ್ಲಿ ವಿಜಯ್‌ ಅವರು ಎಐಎಡಿಎಂಕೆಯ 25 ಬಂಡಾಯ ಶಾಸಕರು ಮತ್ತು ಎಎಂಎಂಕೆಯ ಒಬ್ಬ ಶಾಸಕರ ಬೆಂಬಲದೊಂದಿಗೆ ತಮ್ಮ ಸರ್ಕಾರವನ್ನು ತಾತ್ಕಾಲಿಕವಾಗಿ ಉಳಿಸಿಕೊಳ್ಳಬಹುದು.

ಆದರೆ, ಅಧಿಕಾರ ವಹಿಸಿಕೊಂಡ ಹತ್ತೇ ದಿನಗಳಲ್ಲಿ ವಿರೋಧ ಪಕ್ಷದ ಭ್ರಷ್ಟ ಶಾಸಕರನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ, ಅದು ಸಾರ್ವಜನಿಕರಲ್ಲಿ ಸಿಎಂ ವಿಜಯ್‌ ಅವರ ಇಮೇಜ್‌ಗೆ ಭಾರಿ ದೊಡ್ಡ ನಕಾರಾತ್ಮಕ ಸಂದೇಶವನ್ನು ರವಾನಿಸಲಿದೆ. ಈ ಭೀಕರ ರಾಜಕೀಯ ಪೇಚಿನಿಂದ ಪಾರಾಗಲು ಮತ್ತು ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಟಿವಿಕೆ ಪಕ್ಷದ ಕೋರ್‌ ಕಮಿಟಿ ತುರ್ತು ಸಭೆಗಳನ್ನು ನಡೆಸುತ್ತಿದೆ.

RELATED ARTICLES

Latest News